ಹೈದರಾಬಾದ್: ಲಾಕ್ಡೌನ್ ಸಂಕಷ್ಟ ಸಮಯದಲ್ಲಿ ಅಗತ್ಯವಿರುವವರಿಗೆ ಆಹಾರ, ನೀರು ಪೂರೈಸುವ ದಾನಿಗಳನ್ನು ನೋಡಿದ್ದೇವೆ. ಆದರೆ ಮದ್ಯ ವ್ಯಸನಿಗಳಿಗೆ ಪುಕ್ಕಟೆಯಾಗಿ ಸಾರಾಯಿ ಹಂಚಿದ್ದನ್ನು ನೀವು ಎಲ್ಲಿಯೂ ನೋಡಿರಲಿಕ್ಕಿಲ್ಲ. ಹೈದರಾಬಾದ್ನ ವ್ಯಕ್ತಿಯೊಬ್ಬ ರವಿವಾರ ಬೆಳಗ್ಗೆ ಕೆಲ ಮದ್ಯ ವ್ಯಸನಿಗಳಿಗೆ ಅಲ್ಪ ಪ್ರಮಾಣದ ಮದ್ಯ ನೀಡಿ ಸುದ್ದಿಯಾಗಿದ್ದಾರೆ.
ಹೈದರಾಬಾದಿನ ಕುಮಾರ್ ಎಂಬುವರು ಮದ್ಯ ಹಂಚಿದ ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡಿದ್ದು, "ನಿನ್ನೆಯ ದಿನ ನನ್ನ ಕೆಲಸ ಮುಗಿಸಿ ಮನೆಗೆ ಮರಳುತ್ತಿರುವಾಗ ಹಳೆ ಹೈದರಾಬಾದ್ ಪ್ರದೇಶವೊಂದರಲ್ಲಿ ಮದ್ಯ ವ್ಯಸನಿ ಮಹಿಳೆಯೊಬ್ಬಳು ಮದ್ಯ ಸಿಗದೆ ಸೆಳೆತಕ್ಕೊಳಗಾಗಿ ಒದ್ದಾಡುತ್ತಿರುವುದನ್ನು ನೋಡಿದೆ. ಅವಳನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಇದೇ ರೀತಿ ಅನೇಕ ಮದ್ಯವ್ಯಸನಿಗಳು ಬಾಧೆ ಪಡುತ್ತಿರುವುದನ್ನು ನೋಡಲಾಗದೆ ನನ್ನ ಮನೆಯಲ್ಲಿದ್ದ ಕೆಲ ಬಾಟಲಿ ಮದ್ಯವನ್ನು ಅವರಿಗೆ ಹಂಚಿದೆ." ಎಂದು ಹೇಳಿದ್ದಾರೆ.
ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸುವ ಯಾವುದೇ ಇರಾದೆ ನನ್ನದಾಗಿರಲಿಲ್ಲ. ಆದರೆ ಮಾನವೀಯತೆಯ ದೃಷ್ಟಿಯಿಂದ ಮದ್ಯ ಹಂಚಿಕೆ ಮಾಡಿದ್ದೇನೆ ಎಂದು ಕುಮಾರ್ ತಿಳಿಸಿದ್ದಾರೆ. ತೆಲಂಗಾಣದಲ್ಲಿ ಲಾಕ್ಡೌನ್ ಏ.30 ರವರೆಗೆ ಮುಂದುವರಿಯುವುದು ಖಚಿತವಾಗಿದ್ದು, ಮದ್ಯ ವ್ಯಸನಿಗಳು ಮತ್ತೆ ಕೆಲ ದಿನ ಕಾಯುವುದು ಅನಿವಾರ್ಯವಾಗಿದೆ.