ಹೈದರಾಬಾದ್(ತೆಲಂಗಾಣ): ಯಾವುದೇ ಬೆಳೆ ಬೆಳೆಯೋಕೆ ಗದ್ದೆ, ಮಣ್ಣು ಇರಬೇಕು. ಜೊತೆಗೆ ಆಗಾಗ್ಗೆ ರಾಸಾಯನಿಕಗಳನ್ನು ಬಳಸಬೇಕು ಅಂತಾ ತಿಳಿದಿದ್ದೇವೆ. ಆದ್ರೆ ಮಣ್ಣು ಮತ್ತು ಕೀಟನಾಶಕಗಳನ್ನು ಬಳಸದೆಯೇ ಆಧುನಿಕ ಕೃಷಿ ವಿಧಾನವಾದ ಹೈಡ್ರೋಪೋನಿಕ್ಸ್ ಬಳಸಿ ತರಕಾರಿ ಬೆಳೆದು ಗಮನ ಸೆಳೆದಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡ ಡಾ. ಸತ್ಯ ನಾರಾಯಣ ರೆಡ್ಡಿ, ಹೈಡ್ರೋಪೋನಿಕ್ಸ್ ಎನ್ನುವುದು ನೀರು ಆಧಾರಿತ ಪೋಷಕಾಂಶಗಳ ಸಮೃದ್ಧ ದ್ರಾವಣಗಳಲ್ಲಿ ಸಸ್ಯಗಳನ್ನು ಬೆಳೆಯುವ ಒಂದು ವಿಧಾನವಾಗಿದೆ. ಈ ಸಸ್ಯಗಳಿಗೆ ಮಣ್ಣಿನ ಅಗತ್ಯವಿಲ್ಲ, ಬದಲಾಗಿ, ಪರ್ಲೈಟ್, ಉಣ್ಣೆ ಬಟ್ಟೆ, ಕ್ಲೇ ಬಾಲ್, ಪಾಚಿಯಂತಹ ವಸ್ತುಗಳನ್ನು ಬಳಸಿ ಬೆಳೆಯಬಹುದು ಎಂದು ತಿಳಿಸಿದ್ದಾರೆ.
ಈ ಆಧುನಿಕ ವಿಧಾನದಿಂದ ನಾವು ಇತರ ಬೇಸಾಯ ಪದ್ಧತಿಗಳಲ್ಲಿ ಬಳಕೆಯಾಗುವ ಶೇ.90ರಷ್ಟು ಕಡಿಮೆ ನೀರನ್ನು ಬಳಸುತ್ತೇವೆ. ಅಲ್ಲದೆ ಕೀಟನಾಶಕ ರಹಿತ ತರಕಾರಿಯನ್ನು ಬೆಳೆಯುತ್ತಿದ್ದೇವೆ. ಜೊತೆಗೆ ಮಣ್ಣಿನಿಂದ ಹರಡುವ ಹಲವು ರೋಗಗಳನ್ನು ಇದರಿಂದ ತಡೆಗಟ್ಟಬಹುದು ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಡಾ. ಸತ್ಯ ನಾರಾಯಣ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಈ ಬಗ್ಗೆ ಮಾತನಾಡಿ, ಕೀಟನಾಶಕ ರಹಿತ ತರಕಾರಿಗಳು ಮತ್ತು ಹಣ್ಣು ಹಂಪಲು ಹುಡುಕುವವರಿಗೆ ಮತ್ತು ಆರೋಗ್ಯಕರ ಜೀವನ ಶೈಲಿ ಬಯಸುವವರಿಗೆ ಇದೊಂದು ಅತ್ಯುತ್ತಮ ಮಾರ್ಗವಾಗಿ ಎಂದಿದ್ದಾರೆ.