ಹೈದರಾಬಾದ್ : ಪತಿಯ ಅಕ್ರಮ ಸಂಬಂಧಕ್ಕೆ ಮನನೊಂದು ಮಹಿಳಾ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಬರ್ಪೇಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪಾವನಿ ಎಂಬ ಮಹಿಳೆ ಐದು ವರ್ಷಗಳ ಹಿಂದೆ ಸುಕೀತ್ ಎಂಬುವವರನ್ನು ವರಿಸಿದ್ದರು. ಮದುವೆ ಬಳಿಕ ನಗರದ ಅಂಬರ್ಪೇಟ್ನಲ್ಲಿ ದಂಪತಿ ವಾಸವಿದ್ದರು. ಸುಕೀತ್ ವರದಕ್ಷಿಣೆಗಾಗಿ ಪತ್ನಿ ಪಾವನಿಗೆ ಕಿರುಕುಳ ನೀಡುತ್ತಿದ್ದ. ಕಳೆದ ಕೆಲವು ತಿಂಗಳುಗಳಿಂದ ಇನ್ನೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಸುಕೀತ್ ನೀಡುತ್ತಿದ್ದ ಕಿರುಕುಳ ಮತ್ತು ಪತಿಯ ಅನೈತಿಕ ಸಂಬಂಧದಿಂದ ಖಿನ್ನತೆಗೆ ಒಳಗಾಗಿದ್ದ ಪಾವನಿ ಶುಕ್ರವಾರ ರಾತ್ರಿ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಸುಕೀತ್ ವಿರುದ್ಧ ಸೆಕ್ಷನ್ 304-ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ಆರಂಭವಾಗಿದೆ.