ಪಶ್ಚಿಮಗೋದಾವರಿ(ಆಂಧ್ರಪ್ರದೇಶ) : ಕಿತ್ತು ತಿನ್ನುವ ಬಡತನದಿಂದಾಗಿ ತಾಯಿಯೊಬ್ಬಳು ತನ್ನ ಮಗುವಿನ ಜೀವ ಹಾಗೂ ಜೀವನಕ್ಕಾಗಿ ಕಠಿಣ ಹೆಜ್ಜೆ ಇಟ್ಟಿದ್ದಾಳೆ. ತನ್ನ ಮಗುವಿಗೆ ಆಶ್ರಯ ದೊರಕಬಹುದೆಂಬ ನಿರೀಕ್ಷೆಯಲ್ಲಿ ಅವಳು ಮಗುವನ್ನು ಮಾರಾಟ ಮಾಡುವ ನಿರ್ಧಾರ ಕೈಗೊಂಡಿದ್ದಳು. ಅಷ್ಟರಲ್ಲಿ ಚಾರಿಟಿ ಸಂಸ್ಥೆಯೊಂದು ಇದನ್ನು ನಿಲ್ಲಿಸಿ ಹೆಣ್ಣು ಮಗುವನ್ನು ಮಕ್ಕಳ ಆರೈಕೆ ಕೇಂದ್ರಕ್ಕೆ ಕರೆ ತಂದಿದೆ.
ಆಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಯ ದೆಂಡುಲೂರ್ ಗ್ರಾಮದಲ್ಲಿ ಈ ಮನಕಲುಕುವ ಘಟನೆ ನಡೆದಿದೆ. ತನ್ನ ಮಗುವಿನ ಜೀವವನ್ನು ಉಳಿಸಲು ಒಬ್ಬ ತಾಯಿ ಯಾವುದೇ ಆಸಾಧ್ಯವಾಗದ ಕೆಲಸವನ್ನಾದರೂ ಮಾಡಿಯಾಳು ಎಂಬುದಕ್ಕೆ ಇದೊಂದು ನಿದರ್ಶನವೇ ಸರಿ. ಈ ದುಸ್ಥಿತಿ ಅನುಭವಿಸುತ್ತಿರುವ ತಾಯಿಯೇ ಗುಂಟೂರು ಜಿಲ್ಲೆಯ ಪೆಡಕುರಪಾಡು ಗ್ರಾಮದ ನಿವಾಸಿ ಶಿರಿಶಾ.
ಈಕೆ ತನ್ನ ಪೋಷಕರು ತೀರಿಕೊಂಡಿದ್ದರಿಂದ ಸಹೋದರಿಯ ಮನೆಗೆ ಇರಲು ಹೋದಳು. ಆದರೆ, ದುರದೃಷ್ಟವಶಾತ್ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರಿಂದ ಅವರ ಮಗ ತೇಜ್ ಸಾಯಿಯ ಜವಾಬ್ದಾರಿಯನ್ನು ಸಿರಿಶಾಳೇ ತೆಗೆದುಕೊಳ್ಳಬೇಕಾಯಿತು. ಹಳ್ಳಿಯಲ್ಲಿ ಉದ್ಯೋಗವಿಲ್ಲದ ಕಾರಣ, ಅವಳು ಅಕ್ಕನ ಮಗನೊಂದಿಗೆ ಎಲೂರು ತಲುಪಿದಳು.
ಎಲೂರಿನಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಆಕೆಗೆ ಅದೇ ಊರಿನಲ್ಲಿ ವಾಸಿಸುತ್ತಿದ್ದ ಬುದ್ಧ ರವಿ ಎಂಬ ವ್ಯಕ್ತಿಯ ಪರಿಚಯವಾಯಿತು. ಅವನು ಅವಳನ್ನು ಪುಸಲಾಯಿಸಿ ಅವಳೊಂದಿಗೆ ತೇಜ್‌ನನ್ನು ನೋಡಿಕೊಳ್ಳುತ್ತೇನೆಂದು ಹೇಳಿ ಮದುವೆಯಾದನು. ನಂತರ ಅವನು ತನ್ನ ನಿಜವಾದ ಬಣ್ಣ ತೆರೆದಿದ್ದು ಆತ ಇನ್ನೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧವನ್ನು ಹೊಂದಿರೋದು ತಿಳಿದಾಗ. ಆನಂತರ ಆತ ಶಿರಿಶಾಗೆ ಕಿರುಕುಳ ನೀಡಲು ಪ್ರಾರಂಭಿಸಿದ. ಅಷ್ಟರಲ್ಲಿ ಶಿರಿಶಾ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಗಂಡನ ಕಿರುಕುಳ ಸಹಿಸಲಾಗದ ಆಕೆ ಪೊಲೀಸರನ್ನು ಸಂಪರ್ಕಿಸಿದಳು.
ನಂತರ ಬುದ್ಧ ರವಿ ಇನ್ನೊಬ್ಬ ಮಹಿಳೆಯೊಂದಿಗೆ ಮನೆ ಬಿಟ್ಟು ಹೋಗಿ, ಶಿರಿಶಾ ಹಾಗೂ ಮಕ್ಕಳನ್ನ ಕೈಬಿಟ್ಟನು. ಕೋವಿಡ್ ಸಮಯದಲ್ಲಿ ಅವರು ಜೀವನೋಪಾಯಕ್ಕಾಗಿ ಹೆಣಗಾಡಿದರು. ಅವಳ ಪಾಲಿಗೆ ಎಲ್ಲಾ ದಾರಿಗಳೂ ಮುಚ್ಚಿತೆನಿಸಿದಾಗ ಅವಳು ತನ್ನ ಮಗುವನ್ನು ಮಾರಾಟ ಮಾಡಲು ನಿರ್ಧರಿಸಿದಳು. ಮಗುವನ್ನು ಯಾರಿಗಾದರೂ ಮಾರುವುದರಿಂದ ಮಗು ಸುರಕ್ಷಿತವಾಗಿರುತ್ತದೆ ಎಂದು ಅವಳು ಭಾವಿಸಿದ್ದಳು. ಜೊತೆಗೆ ಆ ಹಣದಿಂದ ಅವಳು ಮತ್ತು ಅವಳ ಮಗ (ಸೋದರಿಯ ಮಗ) ಕೆಲವು ದಿನಗಳವರೆಗೆ ಬದುಕುಳಿಯಬಹುದು ಎಂದು ಅವಳು ಭಾವಿಸಿದ್ದಳು.
ಈ ವಿಷಯ ತಿಳಿದ "ಸೇವ್ ಮಿಷನ್" ಸಂಸ್ಥೆಯ ಅಧ್ಯಕ್ಷ ಮೆಡಿಡಿ ನಿಕೋಲಾ ಅಲ್ಲಿಗೆ ತಲುಪಿ ಅವಳನ್ನು ಸಮಾಧಾನ ಮಾಡಿ. ಮಗುವನ್ನು 2 ತಿಂಗಳ ಮಟ್ಟಿಗೆ ಮಕ್ಕಳ ಆರೈಕೆ ಕೇಂದ್ರದಲ್ಲಿ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಶಿರಿಶಾ ಪ್ರಕರಣವನ್ನು ಸ್ಥಳೀಯ ಪೊಲೀಸರು ಕೈಗೆತ್ತಿಕೊಂಡಿದ್ದಾರೆ.