ಕೊರೊನಾ ವೈರಸ್ನಿಂದ ಲಾಕ್ಡೌನ್ ಘೋಷಣೆಯಾದ ನಂತರ ಐಟಿ-ಬಿಟಿ ಮಾತ್ರವಲ್ಲದೇ ಇನ್ನೂ ಹಲವಾರು ಕ್ಷೇತ್ರಗಳಲ್ಲಿನ ಉದ್ಯೋಗಿಗಳು ವರ್ಕ್ ಫ್ರಂ ಹೋಂ ಅಂದರೆ ಮನೆಯಿಂದಲೇ ಕಚೇರಿಯ ಕೆಲಸಗಳನ್ನು ನಿಭಾಯಿಸುತ್ತಿದ್ದಾರೆ. ಆದರೆ, ಮನೆಯಲ್ಲಿರುವಾಗ ಆಫೀಸಿನ ಕೆಲಸದ ವಾತಾವರಣ ಇಲ್ಲದಿರುವುದರಿಂದ, ಮನೆಯಲ್ಲಿ ಕೆಲ ಕಾರಣಗಳಿಂದ ಕೆಲಸದ ಮೂಡ್ ಬಾರದೇ ಇರುವುದರಿಂದ ಕೆಲಸದ ವೇಗಕ್ಕೆ ತಡೆಯಾಗುವಂತಾಗುತ್ತದೆ. ಹಾಗಾದರೆ ಯಾವೆಲ್ಲ ಕ್ರಮಗಳನ್ನು ಅನುಸರಿಸುವ ಮೂಲಕ ವರ್ಕ್ ಫ್ರಂ ಹೋಂ ಉದ್ಯೋಗಿಗಳು ತಮ್ಮ ಕಾರ್ಯತತ್ಪರತೆಯನ್ನು ಹೆಚ್ಚಿಸಿಕೊಳ್ಳಬಹುದು ಎಂಬ ಬಗ್ಗೆ ಇಲ್ಲಿವೆ ಮಹತ್ವದ ಟಿಪ್ಸ್... ನೀವೂ ಓದಿ... ಇತರರಿಗೂ ತಿಳಿಸಿ...
ಜಗತ್ತಿನ ಪ್ರಖ್ಯಾತ ನೀತಿ ಮತ್ತು ನಿರ್ವಹಣಾ ಸಂಸ್ಥೆ ಬೈನ್ ಆ್ಯಂಡ್ ಕಂಪನಿ ವರ್ಕ್ ಫ್ರಂ ಹೋಂ ಉದ್ಯೋಗಿಗಳಿಗಾಗಿ ಅಮೂಲ್ಯ ಟಿಪ್ಸ್ಗಳನ್ನು ನೀಡಿದ್ದು, ಅವು ಹೀಗಿವೆ:
- ಪ್ರತಿದಿನ ಕಚೇರಿಯ ವೇಳಾಪಟ್ಟಿಯನ್ನು ಪಾಲನೆ ಮಾಡಿ
- ನಿತ್ಯದಂತೆ ಅದೇ ಸಮಯಕ್ಕೆ ಬೆಳಗ್ಗೆ ಎದ್ದೇಳಿ
- ಸ್ನಾನ ಮಾಡಿ, ಡ್ರೆಸ್ ಮಾಡಿಕೊಂಡು ರೆಡಿಯಾಗಿ
- ತಿಂಡಿ ತಿಂದು ಪ್ರತಿದಿನ ಕಚೇರಿಯಲ್ಲಿ ಕೆಲಸ ಆರಂಭಿಸುತ್ತಿದ್ದ ಸಮಯದಲ್ಲಿಯೇ ಕೆಲಸ ಪ್ರಾರಂಭಿಸಿ
- ನಿಮ್ಮ ವೈಯಕ್ತಿಕ ಜೀವನದ ವಿಷಯಗಳು ನಿಮ್ಮ ಕೆಲಸದ ಕೋಣೆಯೊಳಗೆ ಬರದಂತೆ ಜಾಗ್ರತೆ ವಹಿಸಿ
- ವೈಯಕ್ತಿಕ ಸಂದೇಶಗಳ ಕಡೆಗೆ ಗಮನಹರಿಸುವುದಾದಲ್ಲಿ ಅದನ್ನು ಪ್ರತ್ಯೇಕ ವೈಯಕ್ತಿಕ ಸ್ಥಳದಲ್ಲೇ ಮಾಡಿ
- ಇನ್ನು ನಿಗದಿತ ವಿರಾಮಗಳನ್ನು ತೆಗೆದುಕೊಳ್ಳುವುದರಿಂದ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು
ವಿರಾಮ ಪಡೆದುಕೊಳ್ಳಿ: ನಿಮ್ಮ ಕೆಲಸವನ್ನು ನೀವು ಮೊದಲು ಮೆಚ್ಚಿಕೊಳ್ಳಿ. ಹಾಗೆಯೇ ಕೆಲಸದ ಮಧ್ಯೆ ವಿರಾಮ ಪಡೆಯಲು ಮರೆಯಬೇಡಿ. ವಿರಾಮದಿಂದ ಮತ್ತೆ ಕೆಲಸ ಮಾಡಲು ಹುರುಪು ಮೂಡುತ್ತದೆ. (ಸೋಶಿಯಲ್ ಮೀಡಿಯಾ ನೋಡಲು 5 ನಿಮಿಷ ಅಥವಾ ಊಟಕ್ಕಾಗಿ 45 ನಿಮಿಷ)."
ಮನೆ ಕೆಲಸ ಬೇಡ: ಕಚೇರಿಯ ಕೆಲಸದಲ್ಲಿ ತೊಡಗಿಸಿಕೊಂಡಿರುವ ಸಮಯದಲ್ಲಿ ಮನೆವಾರ್ತೆಯ ಬಗ್ಗೆ ಗಮನಹರಿಸುವುದು ಸಲ್ಲದು.
ವೇಳಾಪಟ್ಟಿ ಇರಲಿ: ದಿನದಲ್ಲಿ ಮಾಡಬೇಕಾದ ಕಚೇರಿಯ ಮುಖ್ಯ ಕೆಲಸಗಳ ಪಟ್ಟಿ ಮಾಡಿಟ್ಟುಕೊಳ್ಳಿ. ಈ ದಿನ, ವಾರ ಅಥವಾ ತಿಂಗಳಲ್ಲಿ ಮುಗಿಸಬೇಕಾದ ಕೆಲಸಗಳೇನಾದರೂ ಇದ್ದಲ್ಲಿ ಅವನ್ನು ಗುರುತಿಸಿಟ್ಟುಕೊಳ್ಳಿ. ಅವನ್ನು ಯಾವಾಗ ಮಾಡಬೇಕೆಂಬುದನ್ನೂ ನಿರ್ಧರಿಸಿ.
ಕೆಲಸದ ಕೋಣೆಗೆ ಸೀಮಿತವಾಗಿರಲಿ: ಮನೆಯಲ್ಲಿ ಎಲ್ಲಿ ಬೇಕಾದಲ್ಲಿ ಕುಳಿತು ಕೆಲಸ ಮಾಡುವುದು ಬೇಡ. ಕೆಲಸಕ್ಕಾಗಿ ಪ್ರತ್ಯೇಕ ಕೋಣೆಯೊಂದನ್ನು ಗುರುತಿಸಿಕೊಳ್ಳಿ. ಕೆಲಸ ಮಾಡುವ ಜಾಗದಲ್ಲೇ ಊಟ ಮಾಡುವುದು ಸರಿಯಲ್ಲ.
ಜೊತೆಯಾಗಿ ಕೆಲಸ ಮಾಡುತ್ತಿದ್ದರೆ ಹೀಗೆ ಮಾಡಿ: ಒಂದು ವೇಳೆ ಇಬ್ಬರು ಸೇರಿ ಒಂದೇ ಕಂಪ್ಯೂಟರ್ ಬಳಸಿ ಕೆಲಸ ಮಾಡುತ್ತಿದ್ದರೆ ಯಾರು ಯಾವಾಗ, ಎಷ್ಟೊತ್ತು ಕಂಪ್ಯೂಟರ್ ಬಳಸಬೇಕೆಂಬುದನ್ನು ಮೊದಲೇ ನಿರ್ಧರಿಸಿ. ಒಬ್ಬರು ಕರೆ ಮಾಡುತ್ತಿರಬೇಕಾದರೆ ಗಮನ ಬೇರೆಡೆ ಇನ್ನೊಬ್ಬರಿಗೆ ತೊಂದರೆಯಾಗದಂತೆ ಜಾಗೃತಿ ವಹಿಸಿ.
ಕನೆಕ್ಟಿವಿಟಿ ಸರಿಯಾಗಿರಲಿ: ಕೆಲಸಕ್ಕೆ ಬೇಕಾದ ಮೂಲ ಸಲಕರಣೆಗಳು ಹಾಗೂ ವೇಗದ ಸುಸ್ಥಿರ ಇಂಟರನೆಟ್ ಕನೆಕ್ಷನ್ ಇರುವಂತೆ ನೋಡಿಕೊಳ್ಳಿ.