ಭುವನೇಶ್ವರ: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವಾಗಲೇ ಕಾಂಗ್ರೆಸ್ ಅಭ್ಯರ್ಥಿ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಒಡಿಶಾದ ಗಂಜಂ ಜಿಲ್ಲೆಯ ಬೆಹ್ರಂಪುರದಲ್ಲಿ ನಡೆದಿದೆ.
ಒಡಿಶಾದ ಅಸ್ಕಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನೋಜ್ ಕುಮಾರ್ ಜೆನ ಹಾಗೂ ಅವರ ಆಪ್ತ ಅನಿಲ್ ಕುಮಾರ್ ಸ್ವೈನ್ ಎಂಬುವರ ಮೇಲೆ ಬುಧವಾರ ಸಂಜೆ ಆರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಜೆನ ಅವರ ಕುತ್ತಿಗೆ ಹಾಗೂ ಎದೆಗೆ ಗುಂಡು ತಾಗಿದೆ. ಗುಂಡು ಹಾರಿಸಿದ ದುಷ್ಕರ್ಮಿಗಳು ಆನಂತರ ಜೆನ ಅವರ ಕತ್ತು ಸೀಳಲು ಯತ್ನಿಸಿದರು ಎನ್ನಲಾಗಿದೆ. ಸ್ವೈನ್ ಅವರ ಕೈಗೆ ಗುಂಡು ತಾಗಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನೂ ಎಂಕೆಸಿಜಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೆನ ಸ್ಥಿತಿ ಚಿಂತಾಜನಕವಾಗಿರುವ ಕಾರಣ ಎಸ್ಸಿಬಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
ಪೊಲೀಸರು ತಿಳಿಸಿದಂತೆ, ಜೆನ ಹಾಗೂ ಸ್ವೈನ್ ಭುವನೇಶ್ವರದಿಂದ ಕಾರಿನಲ್ಲಿ ವಾಪಸ್ಸಾಗುತ್ತಿದ್ದ ವೇಳೆ ಬೆರ್ಹಂಪುರದ ಲಂಜಿಪಲ್ಲಿಯ ಆಕ್ಸ್ಫರ್ಡ್ ಶಾಲೆ ಚೌಕದ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅತ್ಯಂತ ಹತ್ತಿರದಿಂದ ಗುಂಡು ಹಾರಿಸಿ, ಬೈಕ್ಗಳಲ್ಲಿ ಪರಾರಿಯಾಗಿದ್ದಾರೆ. ತಪ್ಪಿಸಿಕೊಳ್ಳುವ ಧಾವಂತದಲ್ಲಿ ಹುಡುಗನೊಬ್ಬನಿಗೆ ಬೈಕ್ವೊಂದು ಗುದ್ದಿದ್ದು, ಗಾಯಗೊಂಡವನಿಗೆ ಚಿಕಿತ್ಸೆ ನಡೆಯುತ್ತಿದೆ. ಕೃತ್ಯಕ್ಕೆ ಬಳಸಿದ ಗನ್ ಹಾಗೂ ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.