ಶಹಜಹಾನ್ಪುರ (ಉತ್ತರಪ್ರದೇಶ): ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ ನಡೆದಿದ್ದು, 16 ವರ್ಷದ ಗರ್ಭಿಣಿಯನ್ನು ತಂದೆ ಮತ್ತು ಹಿರಿಯ ಸಹೋದರ ಸೇರಿ ಕ್ರೂರವಾಗಿ ಹಲ್ಲೆ ಮಾಡಿ ಕೊಂದಿದ್ದಾರೆ. ಕುಟುಂಬಕ್ಕೆ ಅವಮಾನ ಮಾಡಿದ ಕಾರಣ ಆಕೆಯ ಮೃತದೇಹವನ್ನು ವಿರೂಪಗೊಳಿಸಿದ್ದಾರೆ.
ತಂದೆ ತಪ್ಪೊಪ್ಪಿಕೊಂಡಿದ್ದು, ಆತನನ್ನು ಬಂಧಿಸಲಾಗಿದೆ. ಆದರೆ ಸಹೋದರ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯನ್ನು ಥಳಿಸಿ, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಆಕೆಯ ತಲೆಯನ್ನು ದೇಹದಿಂದ ಕತ್ತರಿಸಿ, ನದಿ ಬದಿಯಲ್ಲಿ ಹೂಳಲಾಗಿತ್ತು.
"ತನ್ನ ಮಗಳು ಗರ್ಭಿಣಿಯಾಗಿದ್ದರಿಂದ ಕೊಂದಿದ್ದಾಗಿ ತಂದೆ ತಪ್ಪೊಪ್ಪಿಕೊಂಡಿದ್ದಾನೆ. ಬಾಲಕಿಯ ಹಿರಿಯ ಸಹೋದರನೂ ಈ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ. ಆತ ಪರಾರಿಯಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ. ಇಬ್ಬರ ಮೇಲೂ ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 201ರ (ಸಾಕ್ಷ್ಯ ನಾಶ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ" ಎಂದು ಶಹಜಹಾನ್ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಎಸ್.ಆನಂದ್ ತಿಳಿಸಿದ್ದಾರೆ.
ನಾವು ಬಾಲಕಿಯ ತಾಯಿ ಮತ್ತು ಇತರ ಸಂಬಂಧಿಕರ ವಿಚಾರಣೆ ನಡೆಸಿದ್ದು, ಅವರು ಈ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ತಿಳಿದು ಬಂದಿದೆ. ಪ್ರಾಥಮಿಕ ವಿಚಾರಣೆಯ ವೇಳೆ ಬಾಲಕಿ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಳು ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.
ಬಾಲಕಿ ತನ್ನ ಲೈಂಗಿಕ ಸಂಪರ್ಕದ ಕುರಿತು ಕುಟುಂಬಕ್ಕೆ ತಿಳಿಸಿರಲಿಲ್ಲ. ಆಕೆಯ ಬೇಬಿ ಬಂಪ್ ಗುರುತಿಸಿದ ಮನೆಯವರು ಬಾಲಕಿಯ ಗರ್ಭಧಾರಣೆಯ ಕುರಿತು ತಿಳಿದುಕೊಂಡಿದ್ದಾರೆ.
ಬಾಲಕಿ ಗರ್ಭವತಿಯಾಗಲು ಯಾರು ಕಾರಣ ಎಂದು ಪೊಲೀಸರು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದು, ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ಅತ್ಯಾಚಾರ ನಡೆದಿರಬಹುದು ಎಂಬ ಶಂಕೆಯೂ ಇದೆ.
"ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ಅಪರಾಧವಾದುದರಿಂದ ಬಾಲಕಿಯ ಗರ್ಭಧಾರಣೆಗೆ ಕಾರಣವಾದ ವ್ಯಕ್ತಿಯನ್ನು ಗುರುತಿಸಲು ನಾವು ಪ್ರಯತ್ನಿಸುತ್ತಿದ್ದೇವೆ" ಎಂದು ಎಸ್‌ಎಸ್‌ಪಿ ಆನಂದ್ ಹೇಳಿದ್ದಾರೆ.