ಬಂಡಾ(ಉತ್ತರ ಪ್ರದೇಶ): ಇಲ್ಲಿನ ಬಾಂಡಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಮತ್ತೆ ಮರ್ಯಾದಾ ಹತ್ಯೆ ನಡೆದಿದೆ. 19 ವರ್ಷದ ಯುವತಿ ಮತ್ತು ಆಕೆಯ ಪ್ರಿಯಕರನನ್ನು, ಯುವತಿಯ ಕುಟುಂಬಸ್ಥರೇ ಸುಟ್ಟು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾತೌಂಡ್ ಪ್ರದೇಶದ ಕಾರ್ಚಾ ಗ್ರಾಮದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಕುಟುಂಬ ಸದಸ್ಯರು ಯುವಕ ಹಾಗೂ ಯುವತಿಯನ್ನು ರಾಜಿ ಮಾಡಿಸಲು ಮುಂದಾಗಿದ್ದರು. ಅದಾಗದ ವೇಳೆ ಗುಡಿಸಲಿಗೆ ಬೀಗ ಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ವೇಳೆ ಯುವಕ ಭೋಲಾ (23) ಸಾವನ್ನಪ್ಪಿದ್ದರೆ, ಶೇ. 80 ರಷ್ಟು ಸುಟ್ಟಗಾಯಗಳಿಂದ ಒದ್ದಾಡುತ್ತಿದ್ದ ಯುವತಿ ಪ್ರಿಯಾಂಕಾ, ಮತ್ತೊಂದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಯುವತಿಯ ಕುಟುಂಬದ ಒಂಬತ್ತು ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಅವರಲ್ಲಿ ಮೂವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.