ನವದೆಹಲಿ: ಕೋವಿಡ್-19 ರೋಗಿಗಳನ್ನು ಮೇಲ್ವಿಚಾರಣೆ ಮಾಡಲು ಅಖಿಲ ಭಾರತ ಆರೋಗ್ಯ ಸಂಸ್ಥೆ ಹೃಷಿಕೇಶ ಶಾಖೆ ಹಾಗೂ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಜಂಟಿಯಾಗಿ ರಿಮೋಟ್ ಆರೋಗ್ಯ ಪರಿವೀಕ್ಷಣ ವ್ಯವಸ್ಥೆಯನ್ನು ಬಳಕೆಗೆ ತಂದಿದೆ. ಈ ವ್ಯವಸ್ಥೆಯ ಮೂಲಕ ರೋಗಿಗಳ ತಾಪಮಾನ, ನಾಡಿ ಮಿಡಿತ, ರಕ್ತದ ಆಮ್ಲಜನಕದ ಮಟ್ಟ ಮತ್ತು ಉಸಿರಾಟದ ಪ್ರಮಾಣವನ್ನು ವೈದ್ಯರು ಟೆಲಿ ಮೆಡಿಸಿನ್ ಮೂಲಕ ಮೇಲ್ವಿಚಾರಣೆ ಮಾಡುತ್ತಾರೆ. ಇದರ ಮೂಲಕ ಕೋವಿಡ್-19 ಸೋಂಕಿತರಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಚಿಕಿತ್ಸೆಯನ್ನು ಸೂಚಿಸಲಾಗುತ್ತದೆ. ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳು ಮಿತಿಮೀರಿದ ಒತ್ತಡವನ್ನು ಎದುರಿಸುತ್ತಿದ್ದಾರೆ. ಅವರ ಹೊರೆ ಕಡಿಮೆ ಮಾಡಲು, ಏಮ್ಸ್ ಮತ್ತು ಬಿಇಎಲ್ ಸಂಸ್ಥೆಗಳು ಈ ವ್ಯವಸ್ಥೆಯನ್ನು ರೂಪಿಸಿವೆ.
ಬಿಇಎಲ್ ನ ವಿಜ್ಞಾನಿಗಳು ಸಂವೇದಕಗಳ ಮೂಲಕ ತಾಪಮಾನ, ನಾಡಿ ಮಿಡಿತ ಮತ್ತು ಇತರ ನಿಯತಾಂಕಗಳನ್ನು ಕಂಡುಹಿಡಿಯುವ ‘ಅಪ್ಲಿಕೇಶನ್ ’ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಂವೇದಕಗಳ ಮೂಲಕ ದಾಖಲಿಸಲಾದ ಮಾಹಿತಿಯನ್ನು ವೈದ್ಯರಿಗೆ ರವಾನಿಸಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಒಂದು ಸೆನ್ಸಾರ್ ಅನ್ನು ಮಣಿಕಟ್ಟಿನ ಮೇಲೆ ಮತ್ತು ಇನ್ನೊಂದು ಹೃದಯದ ಹತ್ತಿರ ಇಡುವುದರಿಂದ ವೈದ್ಯರು ತಮ್ಮ ಮೊಬೈಲ್ ಫೋನ್ ಅಥವಾ ಲ್ಯಾಪ್‌ಟಾಪ್‌ಗಳಲ್ಲಿ ರೋಗಿಯ ಆರೋಗ್ಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ. ಕೋವಿಡ್-19 ಶಂಕಿತರು ಆಸ್ಪತ್ರೆಗೆ ತಪಾಸಣೆಗಾಗಿ ಬಂದಾಗ ಅವರಿಗೆ ರಿಮೋಟ್ ಪರಿವೀಕ್ಷಣಾ ವ್ಯವಸ್ಥೆಯ ಸಂವೇದಕ ಕಿಟ್‌ಗಳನ್ನು ನೀಡಲಾಗುತ್ತದೆ. ಈ ಸಂವೇದಕ ಕಿಟ್ ಗಳನ್ನು ಬಳಸುವ ವಿಧಾನವನ್ನು ಕುಟುಂಬ ಸದಸ್ಯರಿಗೆ ತಿಳಿಸಲಾಗುವುದು. ಪರಿಣಾಮವಾಗಿ, ರೋಗಿಯ ಆಸ್ಸತ್ರೆ ಭೇಟಿಯನ್ನು ಕಡಿಮೆ ಮಾಡಿ ಆತ ಮನೆಯಲ್ಲಿದ್ದು ಚಿಕಿತ್ಸೆ ಪಡೆಯುಬಹುದಾಗಿದೆ. ಈ ವ್ಯವಸ್ಥೆಯಿಂದಾಗಿ, ಕುಟುಂಬ ಸದಸ್ಯರ ರೋಗಿಯೊಂದಿಗಿನ ಸಂವಹನವನ್ನು ಸಹ ಕಡಿಮೆ ಮಾಡಬಹುದು.
ಇಂಟರ್ ನೆಟ್ ಆಫ್ ಥಿಂಗ್ಸ್ (ಐಒಟಿ) ಮತ್ತು ಕ್ಲೌಡ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಲಕ್ಷಾಂತರ ರೋಗಿಗಳ ಮಾಹಿತಿಯನ್ನು ಸಂವೇದಕಗಳ ಮೂಲಕ ಏಕಕಾಲದಲ್ಲಿ ಸಂಗ್ರಹಿಸಿ ಸೂಕ್ತ ವೈದ್ಯರಿಗೆ ಮಾಹಿತಿಯನ್ನು ರವಾನಿಸಬಹುದಾಗಿದೆ. ಈ ವ್ಯವಸ್ಥೆ ಬಳಸಿ ವೈದ್ಯರು ಸಮಯಕ್ಕೆ ಸರಿಯಾಗಿ ರೋಗಿಗೆ ಚಿಕಿತ್ಸೆ ನೀಡಬಹುದು ಹಾಗೂ ಅನಗತ್ಯವಾಗಿ ರೋಗಿ ಆಸ್ಪತ್ರೆಗೆ ಬರುವುದನ್ನು ಕಡಿಮೆ ಮಾಡಬಹುದು. ಸ್ಥಳೀಯಮಾಗಿ ಇರುವ ಆಸ್ಪತ್ರೆಗಳು ಹಾಗೂ ಸಂಸ್ಥೆಗಳು ರೋಗಿಗಳ ಮಾಹಿತಿಯನ್ನು ತಿಳಿದುಕೊಂಡು ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.
ಕೋವಿಡ್-19 ಸೋಂಕಿತ ರೋಗಿಯು ಆಸ್ಪತ್ರೆಗಳಲ್ಲಿನ ಪ್ರತ್ಯೇಕ ವಾರ್ಡ್‌ಗಳಲ್ಲಿ ಇದ್ದು ನೋವು ಅನುಭವಿಸಬೇಕಾದ ತೊಂದರೆಯೇ ಇಲ್ಲದೆ ಮನೆಯಲ್ಲಿದ್ದು ಸೂಕ್ತ ಚಿಕಿತ್ಸೆ ಪಡೆಯಬಹುದು. ಆರೋಗ್ಯಕರ ಅಭ್ಯಾಸಗಳು ಮತ್ತು ಸಾಮಾಜಿಕ ಅಂತರವನ್ನು ಅನುಸರಿಸುವ ಮೂಲಕ, ರೋಗಿಗಳು ಶೀಘ್ರವಾಗಿ ಚೇತರಿಸಿಕೊಳ್ಳಬಹುದು. ಈ ವ್ಯವಸ್ಥೆಯಿಂದಾಗಿ ರೋಗಿಯೊಂದಿಗಿನ ವೈದ್ಯಕೀಯ ವ್ಯವಸ್ಥೆಯ ಭೌತಿಕ ಸಂಪರ್ಕವನ್ನು ಕಡಿಮೆಗೊಳಿಸುತ್ತದೆ. ಆದ್ದರಿಂದ ವೈದ್ಯರು ಮತ್ತು ದಾದಿಯರಲ್ಲಿ ಸೋಂಕಿನ ಅಪಾಯವನ್ನು ಕಡಿಮೆಗೊಳಿಸಲು ಸಹಕಾರಿಯಾಗುತ್ತದೆ. ಇದರಿಂದಾಗಿ ವೈದ್ಯರು ಮತ್ತು ದಾದಿಯರು ವೈಯಕ್ತಿಕ ಸಂರಕ್ಷಣಾ ಸಾಧನಗಳನ್ನು ಬಳಸುವ ಅಗತ್ಯವೂ ಇರುವುದಿಲ್ಲ.
ತಾಂತ್ರಿಕವಾಗಿ ಸುಧಾರಿತ ಈ ವ್ಯವಸ್ಥೆಯು ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳ ಹೊರೆಗಳನ್ನು ಕಡಿಮೆಗೊಳಿಸುತ್ತದೆ ಎಂದು ಅಖಿಲ ಭಾರತ ಆರೋಗ್ಯ ಸಂಸ್ಥೆ ಹೃಷಿಕೇಶದ ಆಡಳಿತ ನಿರ್ದೇಶಕ ಹಾಗೂ ವಿಕಿರಣಶಾಸ್ತ್ರ ವಿಭಾಗದ ಡಾ.ಮೊಹಿತ್ ಹೇಳಿದರು. ಇದು ಸಾಂಕ್ರಾಮಿಕ ರೋಗ ಹರಡುವಿಕೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ತುರ್ತು ಪ್ರಕರಣಗಳತ್ತ ಗಮನ ಹರಿಸಲು ವೈದ್ಯರಿಗೆ ಅವಕಾಶ ಮಾಡಿಕೊಡುತ್ತದೆ. ಈ ವ್ಯವಸ್ಥೆ ಇನ್ನು ಚಿಕಿತ್ಸಕ ದೃಢೀಕರಣಕ್ಕೆ ಒಳಪಡಬೇಕಾಗಿದೆ.