ಚಂಡೀಗಢ: ಗ್ರೇಟ್ ಹಾಕಿ ಆಟಗಾರ ಬಲ್ಬೀರ್ ಸಿಂಗ್ ಸೀನಿಯರ್ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು, ಅವರನ್ನು ಚಂಡೀಗಢ್‌ದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೊದಲು ಅವರನ್ನು ಮನೆಯಿಂದ ಪಿಜಿಐ ಚಂಡೀಗಢ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಅವರನ್ನು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 'ಶುಕ್ರವಾರ ಸಂಜೆ ಅವರ ಆರೋಗ್ಯವು ಹಠಾತ್ತನೆ ಹದಗೆಟ್ಟಿತ್ತು. ಅವರು ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರು ಫೋರ್ಟಿಸ್ ಆಸ್ಪತ್ರೆಯ ಐಸಿಯುನಲ್ಲಿದ್ದಾರೆ ಎಂದು ಹಾಕಿ ಆಟಗಾರನ ಮೊಮ್ಮಗ ಕಬೀರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಕಳೆದ ಎರಡು-ಮೂರು ದಿನಗಳಿಂದ ಅವರಿಗೆ ಉಸಿರಾಟದ ತೊಂದರೆ ಇದೆ. ಅವರ ವಿವಿಧ ಅಂಗಗಳ ಮೇಲೂ ಪರಿಣಾಮ ಬೀರಿದೆ. ಅವರ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
95 ವರ್ಷ ವಯಸ್ಸಿನ ಬಲ್ಬೀರ್ ಉಸಿರಾಟದ ತೊಂದರೆಯಿಂದಾಗಿ ಕಳೆದ ವರ್ಷ ಚಂಡೀಗಢ್‌ದ ಪಿಜಿಐಎಂಆರ್ನಲ್ಲಿ ಹಲವಾರು ವಾರಗಳನ್ನು ಕಳೆದಿದ್ದರು. ಆ ಸಮಯದಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಕ್ರೀಡಾ ಸಚಿವ ರಾಣಾ ಗುರ್ಮೀತ್ ಸಿಂಗ್ ಸೋಧಿ ಅವರನ್ನು ಭೇಟಿ ಮಾಡಲು ಬಂದಿದ್ದರು.
ವಿಶೇಷವೆಂದರೆ, ಲಂಡನ್ ಒಲಿಂಪಿಕ್ಸ್ -1948, ಹೆಲ್ಸಿಂಕಿ ಒಲಿಂಪಿಕ್ಸ್ -1952 ಮತ್ತು ಮೆಲ್ಬೋರ್ನ್ ಒಲಿಂಪಿಕ್ಸ್ -1956ರಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಶಕ್ತಿಯಾಗಿದ್ದರು ಬಲ್ಬೀರ್. 1952ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ನೆದರ್ಲೆಂಡ್ಸ್ ವಿರುದ್ಧ ಐದು ಗೋಲುಗಳನ್ನು ಬಾರಿಸಿ ಭಾರತವನ್ನು 6-1ರಿಂದ ಗೆಲ್ಲಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ವಿಶ್ವಕಪ್ -1971 ಮತ್ತು ವಿಶ್ವಕಪ್ -1975 ರಲ್ಲಿ ಕಂಚು ಗೆದ್ದ ಭಾರತೀಯ ತಂಡದ ಮುಖ್ಯ ಕೋಚ್ ಆಗಿದ್ದರು ಬಲ್ಬೀರ್.