ಡೆಹರಾಡೂನ್: 14 ವರ್ಷದ ಬಾಲಕಿ ಹೀನಾ ಠಾಕೂರ್ಗೆ ನಿನ್ನೆ ಒಂದು ದಿನದ ಮಟ್ಟಿಗೆ ಉಪ ವಿಭಾಗಾಧಿಕಾರಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಎಸ್ಎಸ್ಎಲ್ಸಿಯಲ್ಲಿ ಬಾಲಕಿ ಹೀನಾ ಶೇ 94 ರಷ್ಟು ಅಂಕ ಪಡೆದುಕೊಂಡ ಹಿನ್ನೆಲೆಯಲ್ಲಿ ಆಕೆಗೆ ಈ ಗೌರವ ಸಿಕ್ಕಿದೆ.
ಅಂದ ಹಾಗೆ ಈ ಬಾಲಕಿ ತಂದೆ ಕಂಗ್ರಾ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪ್ಯೂನ್ ಆಗಿ ಕೆಲಸ ಮಾಡ್ತಿದ್ದಾರೆ. ಇವರ ಮಗಳು 10ನೇ ತರಗತಿಯಲ್ಲಿ ಶೇ 94 ರಷ್ಟು ಅಂಕ ಪಡೆದುಕೊಂಡಿದ್ದರು. ಬಡತನದಲ್ಲೂ ಸಾಧನೆ ಮಾಡಿದ ಬಾಲಕಿಗೆ ಅಲ್ಲಿನ ಉಪವಿಭಾಗಾಧಿಕಾರಿ ಈ ಗೌರವ ನೀಡಿ, ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.
ಒಂದು ದಿನ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯ ನಿರ್ವಹಣೆ ಮಾಡಿದ ಬಾಲಕಿ, ಮುಂದೆ ತಾನು ಐಎಎಸ್ ಅಧಿಕಾರಿ ಆಗಬೇಕು ಎಂಬ ಆಶಯ ಹೊಂದಿದ್ದೇನೆ ಎಂದು ತಿಳಿಸಿದ್ದಾಳೆ ಎಂದು ಉಪವಿಭಾಗಾಧಿಕಾರಿ ಜಿತನ್ ಲಾಲ್ ಹೇಳಿದ್ದಾರೆ. ಬಾಲಕಿಯ ಕನಸು ಈಡೇರಿಸಲು ಅವಳಿಗೆ ಏಕೆ ಒಂದು ದಿನ ಉಪವಿಭಾಧಿಕಾರಿ ಆಗಿ ಸೇವೆ ಸಲ್ಲಿಸಲು ಅವಕಾಶ ನೀಡಬಾರದು ಎಂದೆನಿಸಿತು. ಹೀಗಾಗಿ ಅವರ ಕನಸು ನನಸು ಮಾಡಲು ಈ ನಿರ್ಧಾರ ಕೈಗೊಂಡೆ ಎಂದು ಅವರು ತಿಳಿಸಿದ್ದಾರೆ.