ಶಿಮ್ಲಾ(ಹಿಮಾಚಲ ಪ್ರದೇಶ): ಮಂಗಳವಾರ ರಾತ್ರಿಯಿಂದ ಭಾರಿ ಪ್ರಮಾಣದ ಹಿಮಪಾತ ಆಗುತ್ತಿರುವುದರಿಂದ ವಾಹನ ಸಂಚಾರ ಸ್ಥಬ್ದವಾಗಿದ್ದು, ಜನ ಜೀವನ ಅಸ್ಥವ್ಯಸ್ಥಗೊಂಡಿದೆ.
ಹಿಮಾಚಲ ಪ್ರದೇಶದ ಹಲವೆಡೆ ಭಾರಿ ಪ್ರಮಾಣದ ಹಿಮಪಾತವಾಗುತ್ತಿದ್ದು, ಎಂಟು ಜಿಲ್ಲೆಗಳಲ್ಲಿ ಒಂದರಿಂದ ನಾಲ್ಕು ಅಡಿಯಷ್ಟು ಎತ್ತರದಷ್ಟು ಹಿಮ ಬಿದ್ದಿದೆ ಎಂಬ ಮಾಹಿತಿ ಇದೆ. ರಸ್ತೆಗಳೆಲ್ಲ ಹಿಮಾವೃತವಾಗಿದ್ದು, ಹಲವು ವಾಹನಗಳು ನಿಂತಲ್ಲೆ ನಿಂತಿವೆ. ಹಲವೆಡೆ ಬಸ್ ಸಂಚಾರ ಸಹ ರದ್ದುಗೊಳಿಸಿದ ಕಾರಣ ಸಾರ್ವಜನಿಕರು ಪರದಾಡುವಂತಾಗಿದೆ.
ರಾಜ್ಯದಾದ್ಯಂತ ಸುಮಾರು 588ಕ್ಕೂ ಹೆಚ್ಚು ರಸ್ತೆಗಳು ಬಂದ್ ಆಗಿದ್ದು, 2,436 ವಿದ್ಯುತ್ ಲೈನ್ಗಳ ಸಂಪರ್ಕ ಕಡಿತಗೊಳಿಸಲಾಗಿದೆ. ಇಷ್ಟೆ ಅಲ್ಲದೆ 33 ಕಡೆ ನೀರು ಸರಬರಾಜು ಸಂಪರ್ಕಕ್ಕೂ ಅಡ್ಡಿಯಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ರಸ್ತೆಗಳಲ್ಲಿ ತುಂಬಿರುವ ಹಿಮವನ್ನ ತೆರವುಮಾಡಲು ಸರ್ಕಾರ ಅಲ್ಲಲ್ಲಿ ಜೆಸಿಬಿ ವ್ಯವಸ್ಥೆ ಮಾಡಿದ್ದರೂ ಹಿಮಪಾತದ ಪ್ರಮಾಣ ಹೆಚ್ಚಾಗಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ.