ಮೌಂಟ್ ಅಬು (ರಾಜಸ್ಥಾನ) : ಈ ಭಾಗದ ಏಕೈಕ ಹಿಲ್ ಸ್ಟೇಶನ್ ಆಗಿರುವ ಮೌಂಟ್ ಅಬು ಮೇಲಿನ ವಾತಾವರಣ ಈಗ ಅತ್ಯಂತ ಆಹ್ಲಾದಕರವಾಗಿದೆ. ಸುತ್ತಲಿನ ಬೆಟ್ಟ ಗುಡ್ಡಗಳು ಮೋಡಗಳಿಂದ ಮರೆಮಾಚಿರುವ ದೃಶ್ಯ ಕಣ್ಮನ ಸೆಳೆಯುತ್ತಿವೆ. ಮೋಡಗಳ ಓಡಾಟದಿಂದ ತಂಗಾಳಿಯ ಕಂಪು ಎಲ್ಲೆಡೆ ಪಸರಿಸಿದೆ.
ಮೌಂಟ್ ಅಬು ಬೆಟ್ಟದ ಮೇಲೆ ಈಗ ಅತ್ಯಂತ ಹಿತಕರ ವಾತಾವರಣವಿದ್ದರೂ ಕೊರೊನಾ ಕಾಟದಿಂದಾಗಿ ಪ್ರವಾಸಿಗರು ಮಾತ್ರ ಬರುತ್ತಿಲ್ಲ. ಪ್ರತಿವರ್ಷ ಈ ಸಮಯದಲ್ಲಿ ಸಾವಿರಾರು ಪ್ರವಾಸಿಗರು ಇಲ್ಲಿನ ಸೌಂದರ್ಯ ಕಣ್ತುಂಬಿಕೊಳ್ಳಲು ಬರುತ್ತಿದ್ದರು. ಆದರೆ, ಈ ವರ್ಷ ಮಾತ್ರ ಈ ಬೆಟ್ಟ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದೆ. ಇಂದು ಬೆರಳೆಣಿಕೆಯಷ್ಟು ಪ್ರವಾಸಿಗರು ಮಾತ್ರ ಇಲ್ಲಿದ್ದಾರೆ.
ಬೇಸಿಗೆಯಿಂದ ಬಸವಳಿದ ಜನಕ್ಕೆ ತಂಪು ನೀಡುವ ಈ ಭಾಗದ ಏಕೈಕ ತಾಣ ಇದಾಗಿದೆ. ಆಗಾಗ ಇಲ್ಲಿ ಸಣ್ಣ ಮಳೆ ಜಿನುಗುತ್ತಿದ್ದು, ಪ್ರಕೃತಿ ಸೌಂದರ್ಯ ಇಮ್ಮಡಿಸಿದೆ. ಉದಯಪುರದಿಂದ ಬಂದಿರುವ ಪ್ರವಾಸಿಯೊಬ್ಬರು ಮಾತನಾಡಿ, ಉದಯಪುರದಲ್ಲಿ ತಡೆಯಲಾಗದಷ್ಟು ಬಿಸಿ ವಾತಾವರಣವಿದೆ. ಆದರೆ, ಇಲ್ಲಿಗೆ ಬಂದ ಮೇಲೆ ನೆಮ್ಮದಿ ಮೂಡಿದೆ ಎಂದು ಹೇಳಿದರು. ಗುಜರಾತಿನಿಂದ ಬಂದಿರುವ ಮತ್ತೊಬ್ಬ ಪ್ರವಾಸಿ ಮಾತನಾಡಿ, ಗುಜರಾತಿನಲ್ಲಿ ಕೊರೊನಾ ಹರಡುವಿಕೆ ವಿಪರೀತವಾಗಿದೆ. ಮಾನಸಿಕ ನೆಮ್ಮದಿಯೇ ಹಾಳಾಗಿದೆ. ಆದರೆ, ಇಲ್ಲಿಗೆ ಬಂದ ಮೇಲೆ ಎಲ್ಲ ಮರೆತು ಮನಸ್ಸಿಗೆ ಖುಷಿಯಾಗಿದೆ ಎಂದು ನುಡಿದರು.