ಅಂಬಾಲ ( ಹರಿಯಾಣ): ಕೇಂದ್ರ ಕೃಷಿ ಕಾನೂನುಗಳ ವಿರುದ್ಧದ 'ದೆಹಲಿ ಚಲೋ' ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪಂಜಾಬ್‌ನ ನೂರಾರು ರೈತರು ಇಂದು ಬೆಳಗ್ಗೆ ಹರಿಯಾಣ ಹಾಗೂ ಅಂತಾರಾಜ್ಯ ಗಡಿಗಳಲ್ಲಿ ಜಮಾಯಿಸಿದ್ದಾರೆ. ಈ ಹಿನ್ನೆಲೆ ಗಡಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಭಾರತೀಯ ಕಿಸಾನ್ ಒಕ್ಕೂಟದ ಅಡಿ ಹರಿಯಾಣ ಮತ್ತು ಪಂಜಾಬ್‌ನ ರೈತರು ಕೇಂದ್ರದ ಹೊಸ ಮೂರು ಕೃಷಿ ಕಾನೂನುಗಳನ್ನು ವಿರೋಧಿಸುತ್ತಿದ್ದಾರೆ. ಹೀಗಾಗಿ ಹರಿಯಾಣದ 6 ಜಿಲ್ಲೆಗಳ ರೈತ ಸಂಘಗಳು, ಅಂದರೆ ಅಂಬಾಲಾ, ಪಂಚಕುಲ, ಯಮುನಾನಗರ್, ಕೈತಾಲ್, ಕರ್ನಾಲ್ ಮತ್ತು ಕುರುಕ್ಷೇತ್ರ ಜಿಲ್ಲೆಗಳು ಅಂಬಾಲಾ ಕಂಟೋನ್ಮೆಂಟ್‌ನಲ್ಲಿರುವ ಮೋಡಾ ಮಂಡಿಯಲ್ಲಿ ಜಮಾಯಿಸಿ ದೆಹಲಿಗೆ ಮೆರವಣಿಗೆ ನಡೆಸಲಿವೆ. ಈ ಹಿನ್ನೆಲೆ ಯಮುನಾನಗರದಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಹರಿಯಾಣದೊಳಗಿನಿಂದ ಹೊರಡುವ ಪ್ರತಿಭಟನಾಕಾರರು ದೆಹಲಿಯ ಕಡೆಗೆ ಸಾಗುವ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳೆಂದರೆ, ಅಂಬಾಲಾದಿಂದ ದೆಹಲಿ, ಹಿಸಾರ್‌ನಿಂದ ದೆಹಲಿ, ರೇವಾರಿಯಿಂದ ದೆಹಲಿ ಮತ್ತು ಪಾಲ್ವಾಲ್ ದೆಹಲಿಗೆ ಪ್ರಯಾಣಿಸಬಹುದು ಹೀಗಾಗಿ.25,26, 27 ರಂದು ಪೊಲಿಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಬೆಳಿಗ್ಗೆಯಿಂದ ಅಂಬಾಲಾ ನಗರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹರಿಯಾಣ ಸರ್ಕಾರ ಪ್ರತಿಭಟನಾಕಾರರ ಸಭೆ ತಡೆಯಲು ಸೆಕ್ಷನ್ 144 ವಿಧಿಸಿದೆ. ಅಲ್ಲದೆ, ಪೊಲೀಸರು ಈಗಾಗಲೇ ಹರಿಯಾಣ ರಾಜ್ಯದ ಸುಮಾರು 100 ರೈತ ಮುಖಂಡರನ್ನು ಕಸ್ಟಡಿಗೆ ಪಡೆದಿದ್ದಾರೆ. ಪೊಲೀಸರ ಅಂದಾಜಿನ ಪ್ರಕಾರ, ನವೆಂಬರ್ 26 ರಂದು ನಡೆಯಲಿರೋ ತಮ್ಮ 'ದೆಹಲಿ ಚಲೋ' ಪ್ರತಿಭಟನೆಗಾಗಿ ಪಂಜಾಬ್‌ನಿಂದ ಸುಮಾರು 2,00,000 ರೈತರು ದೆಹಲಿಗೆ ತೆರಳಲಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಕೆಯು ಅಧ್ಯಕ್ಷ ಬಲ್ಬೀರ್ ಸಿಂಗ್ ರಾಜೇವಾಲ್ "ಪಂಜಾಬ್ ಭಾರತದ ಭಾಗವಲ್ಲ" ಎಂದು ಸಾಬೀತುಪಡಿಸಲು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಪಂಜಾಬ್ ರೈತರಿಗೆ ಅಂತರರಾಜ್ಯ ಗಡಿಗಳನ್ನು ದಾಟದಂತೆ ಮೊಹರು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ "ನಾವು ಹಿಮಾಚಲ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗುವ ಮಾರ್ಗಗಳನ್ನು ಶಾಂತಿಯುತವಾಗಿ ನಿರ್ಬಂಧಿಸುತ್ತೇವೆ. ರಸ್ತೆಗಳಲ್ಲಿ ಧರಣಿಯನ್ನು ಪ್ರಾರಂಭಿಸುತ್ತೇವೆ" ಎಂದು ಅವರು ಟ್ವೀಟ್ ಮಾಡಿದ್ದಾರೆ. ಇನ್ನು ರಾಜಧಾನಿ ದೆಹಲಿಗೆ ಹೋಗಲು ರೈತರಿಗೆ ಅನುಮತಿ ನಿರಾಕರಿಸಿದ್ದಕ್ಕಾಗಿ ರಾಜೇವಾಲ್ ಖಟ್ಟರ್ ಅವರನ್ನು ಪ್ರಶ್ನಿಸಿದ್ದಾರೆ.
ಯುನೈಟೆಡ್ ಫಾರ್ಮರ್ಸ್ ಫ್ರಂಟ್ ನ ಭಾಗವಾದ 33 ಅಂಗಸಂಸ್ಥೆಗಳ 470ಕ್ಕೂ ಹೆಚ್ಚು ರೈತ ಸಂಘಗಳು ನವೆಂಬರ್ 26 ರಿಂದ ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಅನಿರ್ದಿಷ್ಟ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಇನ್ನು ತಮಗೆ ಪ್ರತಿರೋಧ ಒಡ್ಡುತ್ತಿರುವುದಕ್ಕೆ ಪ್ರತಿಭಟನೆ ನಡೆಸಿದ ರೈತರು ದೆಹಲಿಯತ್ತ ಪ್ರಯಾಣಿಸಲು ಅನುಮತಿ ನಿರಾಕರಿಸಿದರೆ ದೆಹಲಿಗೆ ಹೋಗುವ ಎಲ್ಲಾ ರಸ್ತೆಗಳನ್ನು ನಿರ್ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವೇಳೆ ಪ್ರತಿಭಟನೆ ನಡೆಸಲು ಅನುಮತಿ ಇಲ್ಲದ ಕಾರಣ ದೆಹಲಿಗೆ ಪ್ರವೇಶಿಸಲು ಸಾಧ್ಯವಿಲ್ಲ ಅಂತಾ ರೈತರಿಗೆ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಬುಧವಾರದಿಂದ ಪ್ರಾರಂಭವಾಗುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ದೆಹಲಿಯೊಂದಿಗೆ ರಾಜ್ಯ ಗಡಿಯಲ್ಲಿ ಕೆಲವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೂರು ದಿನಗಳವರೆಗೆ ಓಡಾಟ ನಡೆಸದಂತೆ ಪ್ರಯಾಣಿಕರಿಗೆ ಪೊಲೀಸರು ಸೂಚಿಸಿದ್ದಾರೆ. .
"ಕಾನೂನು ಸುವ್ಯವಸ್ಥೆ" ಯನ್ನು ಕಾಪಾಡಲು ಮುಖ್ಯಮಂತ್ರಿ ಖಟ್ಟರ್ ನಿರ್ದೇಶನದಂತೆ ರಾಜ್ಯದ ಗಡಿಯುದ್ದಕ್ಕೂ ಹಲವಾರು ಸ್ಥಳಗಳಲ್ಲಿ ರಸ್ತೆಗಳಿಗೆ ನಿರ್ಬಂಧ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿಯತ್ತ ಸಾಗಲು ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ವಿವಿಧ ಗಡಿ ಪ್ರವೇಶ ಕೇಂದ್ರಗಳ ಮೂಲಕ ಪಂಜಾಬ್‌ನಿಂದ ಹರಿಯಾಣಕ್ಕೆ ಪ್ರವೇಶಿಸುವ ಸಾಧ್ಯತೆಯಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ತನ್ನ ಕೃಷಿ ಕಾನೂನುಗಳನ್ನು ಹಿಂಪಡೆಯುವವರೆಗೆ ಪ್ರತಿಭಟನಾಕಾರರಿಗೆ 'ಲಂಗರ್'( ಉಚಿತ ಊಟ ಸೇವೆ) ಮುಂದುವರಿಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಬುಟಾ ಸಿಂಗ್ ಬುರ್ಜ್‌ಗಿಲ್ ಹೇಳಿದ್ದಾರೆ. ಇದು ಲಕ್ಷ ಲಕ್ಷ ರೈತರು ದೆಹಲಿಯಲ್ಲಿ ನಡೆಸಲಿರೋ ಒಂದು ಐತಿಹಾಸಿಕ ಪ್ರತಿಭಟನೆಯಾಗಲಿದೆ. ನಮ್ಮ ಪ್ರತಿಭಟನೆಯಿಂದ ನಾವು ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂದೂ ತಿಳಿಸಿದ್ದಾರೆ.