ನವದೆಹಲಿ: ಕೋವಿಡ್ -19 ಪರೀಕ್ಷೆಗಾಗಿ ಭಾರತದ ಮೊದಲ ಮೊಬೈಲ್ ಪ್ರಯೋಗಾಲಯವನ್ನು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಪ್ರಾರಂಭಿಸಿದರು. ಇದು ಭಾರತದ ಗ್ರಾಮೀಣ ಪ್ರದೇಶಗಳು ಮತ್ತು ತಲುಪಲು ಕಷ್ಟವಾಗುವ ಪ್ರದೇಶಗಳಲ್ಲಿ ಪರೀಕ್ಷೆ ನಡೆಸುವ ಗುರಿ ಹೊಂದಿದೆ.
"ದೂರದ ಪ್ರದೇಶಗಳಲ್ಲಿ ಪರೀಕ್ಷಾ ಸೌಲಭ್ಯ ಒದಗಿಸಲು, ದೇಶದ ಆಂತರಿಕ, ಹಾಗೂ ಪ್ರವೇಶಿಸಲಾಗದ ಭಾಗಗಳಿಗಾಗಿ ಇಂತಹ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸಲಾಗಿದೆ" ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದರು.
ಆತ್ಮ ನಿರ್ಭರ ಭಾರತ್ ಅಡಿಯಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ಆಂಧ್ರಪ್ರದೇಶದ ಮೆಡ್-ಟೆಕ್ ವಲಯವು ಭಾರತದಲ್ಲಿನ ನಿರ್ಣಾಯಕ ಆರೋಗ್ಯ ತಂತ್ರಜ್ಞಾನಗಳ ಕೊರತೆಯನ್ನು ಪರಿಹರಿಸಲು ಮತ್ತು ಸ್ವಾವಲಂಬನೆಯತ್ತ ಸಾಗಲು ಸಹಕರಿಸಿದೆ ಎಂದರು.
ಈ ಲ್ಯಾಬ್‌ನ ವ್ಯಾಪ್ತಿಯನ್ನು ವಿವರಿಸಿದ ಹರ್ಷ್ ವರ್ಧನ್, "ಇದು ಪ್ರತಿ ದಿನಕ್ಕೆ 25 ಆರ್‌ಟಿ-ಪಿಸಿಆರ್ ಪರೀಕ್ಷೆ, 300 ಎಲಿಸಾ ಪರೀಕ್ಷೆ ಮತ್ತು ಸಿಜಿಹೆಚ್ಎಸ್ ದರಕ್ಕೆ ಅನುಗುಣವಾಗಿ ಟಿಬಿ, ಎಚ್‌ಐವಿ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಹೇಳಿದರು.
"ಫೆಬ್ರವರಿಯಲ್ಲಿ ಕೇವಲ ಒಂದು ಕೋವಿಡ್-19 ಪ್ರಯೋಗಾಲಯದೊಂದಿಗೆ ನಾವು ಕೊರೊನಾ ವಿರುದ್ಧ ಹೋರಾಟವನ್ನು ಪ್ರಾರಂಭಿಸಿದ್ದೆವು. ಇಂದು ಭಾರತದಲ್ಲಿ ಒಟ್ಟು 953 ಪ್ರಯೋಗಾಲಯಗಳಿವೆ. ಈ 953ರಲ್ಲಿ ಸುಮಾರು 699 ಸರ್ಕಾರಿ ಪ್ರಯೋಗಾಲಯಗಳಾಗಿವೆ" ಎಂದು ಅವರು ಹೇಳಿದರು.