ತಿರುವನಂತಪುರಂ: ಶಬರಿಮಲೆಯ ಅಯ್ಯಪ್ಪ ದೇವಸ್ಥಾನದಲ್ಲಿ ಎರಡು ತಿಂಗಳ ಕಾಲ ನಡೆಯಲಿರುವ ವಾರ್ಷಿಕ ಮಂಡಲ ಮಕರ ವಿಲಕ್ಕು ಇದೇ ತಿಂಗಳು 16 ರಂದು ಪ್ರಾರಂಭವಾಗಲಿದ್ದು, ಕೋವಿಡ್ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಕೇರಳ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಜಗತ್ತಿನಾದ್ಯಂತ ಧಾರ್ಮಿಕ ಸಭೆಗಳು ಮತ್ತು ತೀರ್ಥಯಾತ್ರಾ ಕೇಂದ್ರಗಳು ಕೋವಿಡ್ ಹರಡುವಿಕೆಯ ತಾಣಗಳಾಗಿ ಮಾರ್ಪಟ್ಟಿವೆ. ಶಬರಿಮಲೆಗೆ ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸುವ ಹಿನ್ನೆಲೆ, ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕೋವಿಡ್ ಹಿನ್ನೆಲೆ 6 ತಿಂಗಳ ಕಾಲ ಬಾಗಿಲು ಮುಚ್ಚಿದ್ದ ದೇವಸ್ಥಾನ ಪೂಜೆಗಾಗಿ ಕಳೆದ ತಿಂಗಳು ಐದು ದಿನಗಳ ಕಾಲ ತೆರೆದಿತ್ತು.
ಕಿಕ್ಕಿರಿದು ಜನ ಸೇರುವುದು, ಭಕ್ತಾದಿಗಳು ಮುಖಾ ಮುಖಿಯಾಗವುದರಿಂದ ಸುರಕ್ಷತೆ ಕಾಪಾಡುವುದು ಅಸಾಧ್ಯ. ಹಾಗಾಗಿ, ಪ್ರತಿದಿನ ಇಂತಿಷ್ಟು ಎಂಬಂತೆ ಭಕ್ತಾದಿಗಳ ಭೇಟಿಯನ್ನು ನಿಗದಿಪಡಿಸುವುದು ಸೂಕ್ತ ಎಂದು ಸರ್ಕಾರಕ್ಕೆ ತಜ್ಞರ ಸಮಿತಿ ಸಲಹೆ ನೀಡಿದೆ. ಅದರಂತೆ, ದಿನಕ್ಕೆ ಸಾವಿರ ಜನರಿಗೆ ಮಾತ್ರ ದೇವಾಲಯ ಭೇಟಿಗೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಭಕ್ತಾದಿಗಳು ಸ್ಯಾನಿಟೈಸರ್, ಮಾಸ್ಕ್ ಬಳಸುವುದು, ಸಾಮಾಜಿಕ ಅಂತ ಕಾಪಾಡುವುದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಇತ್ತೀಚೆಗೆ ಕೋವಿಡ್ಗೆ ತುತ್ತಾದವರು, ಕೆಮ್ಮು, ಉಸಿರಾಟದ ತೊಂದರೆ ಇರುವವರು, ವಾಸನೆ, ರುಚಿ ಕಳೆದುಕೊಂಡವರು, ಆಯಾಸದಂತ ಸಮಸ್ಯೆಗಳು ಇರುವವರು ಯಾತ್ರೆಯಿಂದ ದೂರವಿರುವಂತೆ ಸೂಚಿಸಲಾಗಿದೆ. ಯಾತ್ರಾರ್ಥಿಗಳು ಬೇಸ್ ಕ್ಯಾಂಪ್ ನೀಲಕಲ್ ತಲುಪುವ 24 ಗಂಟೆಗಳ ಮೊದಲು ಕೋವಿಡ್ ಟೆಸ್ಟ್ ಮಾಡಿ ನೆಗೆಟಿವ್ ವರದಿ ತರಬೇಕು. ಶಬರಿಮಲೆಗೆ ತೆರಳುವ ದಾರಿಯಲ್ಲಿ ನಿಯೋಜಿಸಲಾದ ಸ್ಟೆಪ್ ಕಿಯೋಸ್ಕ್ ಏಜನ್ಸಿಗಳ ಮೂಲಕ ಕೋವಿಡ್ ಟೆಸ್ಟ್ ಮಾಡಿಸಬಹುದು.