ಥಿಂಪು (ಭೂತಾನ್): ಪ್ರಧಾನಿ ಮೋದಿಯವರ ಎರಡು ದಿನಗಳ ಭೂತಾನ್ ಪ್ರವಾಸ ಇಂದಿಗೆ ಮುಗಿದಿದೆ. ಭೂತಾನ್ನಿಂದ ಅವರು ಭಾರತಕ್ಕೆ ಮರಳಿದ್ದಾರೆ.
ಪ್ರಧಾನಿ ಮೋದಿಗೆ ವಿಶೇಷ ಸ್ವಾಗತ ಕೋರಿದ್ದ ಭೂತಾನ್ ಪ್ರಧಾನಿ ಲೋಟೇ ಶೆರಿಂಗ್, ವಿಭಿನ್ನ ರೀತಿಯಲ್ಲೇ ಬೀಳ್ಕೊಟ್ಟಿದ್ದಾರೆ. ರಸ್ತೆಯುದ್ದಕ್ಕೂ ನೂರಾರು ಜನ ಬಾವುಟಗಳು ಹಾಗೂ ಹೂವುಗಳನ್ನು ಹಿಡಿದು ಮೋದಿಗೆ ವಿದಾಯ ಹೇಳಿದ್ರು. ಥಿಂಪುವಿನಲ್ಲಿ ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗೆಲ್ ವ್ಯಾಂಗ್ಚುಕ್ ಏರ್ಪಡಿಸಿದ್ದ ಮಧ್ಯಾಹ್ನದ ಮೃಷ್ಟಾನ್ನ ಭೋಜನವನ್ನು ಸವಿದ ಮೋದಿ, ಅಲ್ಲಿಂದ ಭೂತಾನ್ನ ಮತ್ತೊಂದು ಪ್ರಮುಖ ನಗರ ಪಾರೋಗೆ ತೆರಳಿದರು.
ಮೋದಿ ನಿರ್ಗಮನದ ಬಳಿಕ, ಭೂತಾನ್ ಪ್ರಧಾನಿ ಲೋಟೇ ಶೆರಿಂಗ್ ಮಾತನಾಡುತ್ತಾ, ಈ ಬಾರಿ ಮೋದಿಯ ಭೂತಾನ್ ಆಗಮನದ ಮುಖ್ಯ ವಿಷಯವೇ, ಆರೋಗ್ಯವಂತ ಜನರು ಜನರನ್ನು ಸಂಪರ್ಕಿಸುವುದು ಅಥವಾ ಬೆರೆಯುವುದಾಗಿದೆ. ಮೋದಿಯವರು ಮುಕ್ತ ನಗುವಿನೊಂದಿಗೆ ನಮ್ಮ ದೇಶಕ್ಕೆ ಬಂದರು. ಇಂದು ಮತ್ತೆ ಅದೇ ನಗುವಿನೊಂದಿಗೆ ಇಲ್ಲಿಂದ ನಿರ್ಗಮಿಸಿದ್ದಾರೆ. ಭಾರತ ಸರ್ಕಾರವು ನಮ್ಮ ದೇಶದಲ್ಲಿ ಉಪಗ್ರಹ ಸಂಬಂಧಿ ಗ್ರೌಂಡ್ ಸ್ಟೇಷನ್ ಸ್ಥಾಪಿಸಿರುವುದಕ್ಕಾಗಿ ನಾವು ಎಂದಿಗೂ ಚಿರಋಣಿಯಾಗಿರುತ್ತೇವೆ ಎಂದು ಹರ್ಷ ವ್ಯಕ್ತಪಡಿಸಿದ್ರು.