ನವದೆಹಲಿ: ಹಿಂದೂಸ್ತಾನ್ ಯೂನಿಲಿವರ್ನ ಲೈಫ್‌ಬಾಯ್ ಸೋಪ್ ಜಾಹೀರಾತು ಪ್ರಸಾರ ಮಾಡುವುದನ್ನು ದೆಹಲಿ ಹೈಕೋರ್ಟ್ ತಡೆಹಿಡಿದಿದೆ. ಇದು ರೆಕಿಟ್ ಬೆನ್ಕಿಸರ್ನ ಡೆಟಾಲ್ ಆ್ಯಂಟಿಸೆಪ್ಟಿಕ್ ಲಿಕ್ವಿಡನ್ನು ಅವಮಾನಿಸಿದೆ ಎಂದು ಆರೋಪಿಸಲಾಗಿದೆ.
ನ್ಯಾಯಮೂರ್ತಿ ರಾಜೀವ್ ಸಹೈ ಎಂಡ್ಲಾ ಅವರು ರೆಕಿಟ್‌ಗೆ ಮಧ್ಯಂತರ ಪರಿಹಾರವನ್ನು ನೀಡಿ, ಲೈಫ್ಬಾಯ್ನ ಪ್ರಶ್ನಾರ್ಹ ಜಾಹೀರಾತುಗಳಲ್ಲಿ ಜನರು ಆ್ಯಂಟಿಸೆಪ್ಟಿಕ್ ಲಿಕ್ವಿಡನ್ನು ಬಳಸದಂತೆ ಸುಳಿವು ನಿಡುತ್ತದೆ ಎಂದು ಹೇಳಿದರು.
ಡಿಸೆಂಬರ್ 2018ರಿಂದ ಈ ಜಾಹೀರತನ್ನು ಪ್ರಸಾರ ಮಾಡದಿದ್ದರೂ, ಇನ್ನು ಮುಂದಕ್ಕೆ ಜಾಹಿರಾತು ಪ್ರಸಾರ ಮಾಡುವುದಿಲ್ಲ ಎಂದು ಹಿಂದೂಸ್ತಾನ್ ಯೂನಿಲಿವರ್ ಸ್ಪಷ್ಟೀಕರಣ ನೀಡಿರಲಿಲ್ಲ. ವಿವಾದಿತ ಜಾಹೀರಾತುಗಳನ್ನು ಪ್ರಸಾರ ಮಾಡುವ ಮೊದಲು ರೆಕಿಟ್‌ಗೆ ಸೂಚನೆಯನ್ನೂ ನೀಡಿರಲಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಈ ಆದೇಶ ದೇಶಾದ್ಯಂತ ಎಲ್ಲಾ ದೂರದರ್ಶನ ಚಾನೆಲ್‌ಗಳಿಗೂ ಅನ್ವಯವಾಗಲಿದೆ ಎಂದು ಕೋರ್ಟ್ ಹೇಳಿದೆ.