ಜೋಧ್‌ಪುರ (ರಾಜಸ್ಥಾನ): ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪುಗೆ ಕೇಂದ್ರ ಕಾರಾಗೃಹದ ಹೊರಗಿನಿಂದ ದಿನಕ್ಕೆ ಒಂದು ಬಾರಿ ಆಹಾರ ಪಡೆಯಲು ರಾಜಸ್ಥಾನ ಹೈಕೋರ್ಟ್ ಅವಕಾಶ ನೀಡಿದೆ.
ಹೊರಗಿನಿಂದ ತಂದ ಆಹಾರವನ್ನು ಅಸಾರಾಮ್ ಬಾಪುಗೆ ನೀಡುವ ಮೊದಲು ಸಂಪೂರ್ಣವಾಗಿ ಪರಿಶೀಲಿಸಬೇಕಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಹೊರಗಿನ ಆಹಾರ ಸೇವಿಸುವುದರಿಂದ ಅವರ ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾದರೂ ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯವು ಅಸಾರಾಮ್ ಬಾಪುಗೆ ತಿಳಿಸಿದೆ.
ಆಹಾರ ಪೂರೈಸುವ ವ್ಯಕ್ತಿ ಅವರ ವಿವರಗಳನ್ನು ಉಲ್ಲೇಖಿಸಿ ಜೈಲು ಅಧಿಕಾರಿಗಳಿಗೆ ಅಫಿಡವಿಟ್ ಸಲ್ಲಿಸಬೇಕು. ಗುರುತಿನ ದಾಖಲೆಗಳನ್ನು ಅಫಿಡವಿಟ್‌ನೊಂದಿಗೆ ಲಗತ್ತಿಸಬೇಕಾಗುತ್ತದೆ ಎಂದು ನ್ಯಾಯಾಲಯ ಇದೇ ವೇಳೆ ಆದೇಶಿಸಿದೆ.
ವೃದ್ಧಾಪ್ಯ ಮತ್ತು ವೈದ್ಯಕೀಯ ಸ್ಥಿತಿಯ ಕಾರಣದಿಂದಾಗಿ ಅಸಾರಾಮ್ ಬಾಪು ಅವರು ಜೈಲಿನ ಹೊರಗಿನಿಂದ ವಿಶೇಷ ಆಹಾರ ಪಡೆಯಲು ಅನುಮತಿಸಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಜೈಲಿನಲ್ಲಿ ನೀಡಲಾಗುವ ಆಹಾರವು ರುಚಿಕರವಾಗಿಲ್ಲ ಹಾಗೂ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅಸಾರಾಮ್ ಬಾಪು ಪರ ವಕೀಲರು ವಾದಿಸಿದ್ದರು.