ಹಥ್ರಾಸ್ (ಉತ್ತರ ಪ್ರದೇಶ): ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ ಹಥ್ರಾಸ್ ಸಂತ್ರಸ್ತೆಯ ಕುಟುಂಬಸ್ಥರು ಇಂದು ಲಖನೌಗೆ ತೆರಳಿದ್ದು, ಅಲಹಾಬಾದ್ ಹೈಕೋರ್ಟ್ ಪೀಠದ ಮುಂದೆ ಹಾಜರಾಗಲಿದ್ದಾರೆ.
ಇನ್ನು ಅಕ್ಟೋಬರ್ 1ರಂದು ಸಂತ್ರಸ್ತೆಯ ಕುಟುಂಬಕ್ಕೆ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡುವಂತೆ ನ್ಯಾಯಾಲಯವು ತಿಳಿಸಿತ್ತು. ಅಷ್ಟೇ ಅಲ್ಲದೆ ವಿಚಾರಣೆಯನ್ನು ವೈಯಕ್ತಿಕವಾಗಿ ನಡೆಸುವ ಸಾಧ್ಯತೆಯಿದೆ. ಇನ್ನು ಕುಟುಂಬದ ಪ್ರಯಾಣಕ್ಕೆ ವ್ಯವಸ್ಥೆ ಮಾಡುವಂತೆ ನ್ಯಾಯಾಲಯವು ಹಥ್ರಾಸ್ ಜಿಲ್ಲಾಡಳಿತಕ್ಕೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಬಿಗಿಭದ್ರತೆಯೊಂದಿಗೆ ಕುಟುಂಬವನ್ನು ಕರೆದುಕೊಂಡು ಬರಲಾಗುತ್ತಿದೆ.
ಇನ್ನು ಈ ಬಗ್ಗೆ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಂಜಲಿ ಗಂಗ್ವಾರ್ ಮಾತನಾಡಿ, "ನಾನು ಅವರೊಂದಿಗೆ ಹೋಗುತ್ತಿದ್ದೇನೆ. ಸರಿಯಾದ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಹಥ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ್ ಕುಮಾರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ಕೂಡ ಲಖನೌಗೆ ಪ್ರಯಾಣ ಬೆಳೆಸುತ್ತಿದ್ದಾರೆ" ಎಂದರು.
ನ್ಯಾಯಮೂರ್ತಿ ಪಂಕಜ್ ಮಿಥಾಲ್ ಮತ್ತು ನ್ಯಾಯಮೂರ್ತಿ ರಾಜನ್ ರಾಯ್ ಅವರ ವಿಭಾಗೀಯ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.