ನವದೆಹಲಿ: ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ನಡೆದ ಯುವತಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್ನಿಂದ ಮಹತ್ವದ ಆದೇಶ ಹೊರಬೀಳಲಿದೆ. ಪ್ರಕರಣದ ತನಿಖೆ ಕೋರ್ಟ್ ಮೇಲುಸ್ತುವಾರಿಯಲ್ಲಿ ನಡೆಸಬೇಕೋ ಅಥವಾ ಬೇಡ್ವೋ ಎಂಬ ಬಗ್ಗೆ ತೀರ್ಪು ಪ್ರಕಟಗೊಳ್ಳಲಿದೆ.
ಪ್ರಕರಣದ ವಿಚಾರಣೆ ಕೋರ್ಟ್ ಮೇಲುಸ್ತುವಾರಿಯಲ್ಲೇ ನಡೆಸಬೇಕು ಎಂದು ಅರ್ಜಿ ಸಲ್ಲಿಕೆ ಮಾಡಲಾಗಿದೆ. ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿ ಎಸ್.ಎ ಬೊಬ್ಡೆ, ಜಸ್ಟೀಸ್ ಎ.ಎಸ್ ಬೋಪಣ್ಣ ಹಾಗೂ ಜಸ್ಟೀಸ್ ವಿ.ರಾಮಸುಬ್ರಹ್ಮಣ್ಯಂ ನೇತೃತ್ವದ ಮೂವರ ಸದಸ್ಯರ ಪೀಠವು ತೀರ್ಪು ಕಾಯ್ದಿರಿಸಿದ್ದು, ಇಂದು ಪ್ರಕಟಗೊಳ್ಳಲಿದೆ.
ಹಥ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶದಲ್ಲಿ ನ್ಯಾಯಸಮ್ಮತವಾದ ತನಿಖೆ ನಡೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಈ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರ ಮಧ್ಯೆ ಸಂತ್ರಸ್ತೆ ಕುಟುಂಬದ ಪರ ವಾದ ಮಂಡನೆ ಮಾಡಿತ್ತಿರುವ ಲಾಯರ್ ಕೂಡ ಪ್ರಕರಣವನ್ನ ದೆಹಲಿಗೆ ವರ್ಗಾವಣೆ ಮಾಡುವಂತೆ ಮನವಿ ಮಾಡಿದ್ದರು.
19 ವರ್ಷದ ಯುವತಿ ಮೇಲೆ ಸೆಪ್ಟೆಂಬರ್ 14ರಂದು ಸಾಮೂಹಿಕ ಅತ್ಯಾಚಾರವೆಸಗಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆಕೆ ಸೆ.29ರಂದು ದೆಹಲಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಪ್ರಕರಣಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.