ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ಪಕ್ಷಪಾತ ಮಾಡಿದೆ ಎಂದು ದೇಶದ ಯಾವುದೇ ವರ್ಗದ ಜನರು ಹೇಳದಿರುವುದು ಸಂತೋಷದ ವಿಷಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
'ರಾಷ್ಟ್ರೀಯ ಶಿಕ್ಷಣ ನೀತಿಯಡಿ ಉನ್ನತ ಶಿಕ್ಷಣದ ಕ್ರಾಂತಿಕಾರಿ ಬದಲಾವಣೆ' ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಮಾತನಾಡಿದ ಪಿಎಂ ಮೋದಿ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಾಗಿನಿಂದಲೂ ಯಾರೊಬ್ಬರೂ ಕೂಡ ಇದರಲ್ಲಿ ಪಕ್ಷಪಾತ ಇದೆ ಎಂದು ಟೀಕಿಸಲಿಲ್ಲ, ಇದನ್ನು ವಿರೋಧಿಸಿಲ್ಲ. ಭವಿಷ್ಯದಲ್ಲಿ ಎಲ್ಲದಕ್ಕೂ ಸಿದ್ಧರಿರುವಂತೆ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯನ್ನು ಸಶಕ್ತರನ್ನಾಗಿ ಮಾಡುವುದೇ ಎನ್‌ಇಪಿಯ ಗುರಿಯಾಗಬೇಕು ಎಂದರು.
3 - 4 ವರ್ಷಗಳ ಕಾಲ ವ್ಯಾಪಕ ಚರ್ಚೆಗಳು ಮತ್ತು ಲಕ್ಷಾಂತರ ಜನರ ಸಲಹೆಗಳ ಕುರಿತು ಚರ್ಚಿಸಿದ ಬಳಿಕ ಎನ್‌ಇಪಿಯಲ್ಲಿ ಬದಲಾವಣೆ ಕೈಗೊಂಡು 'ಹೊಸ ಶಿಕ್ಷಣ ನೀತಿ' ಜಾರಿಗೆ ತರಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಇಂದು ರಾಷ್ಟ್ರದಾದ್ಯಂತ ಚರ್ಚಿಸಲಾಗುತ್ತಿದೆ. ವಿವಿಧ ಕ್ಷೇತ್ರಗಳು ಮತ್ತು ವಿವಿಧ ಸಿದ್ಧಾಂತವುಳ್ಳ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದು ಆರೋಗ್ಯಕರ ಚರ್ಚೆಯಾಗಿದ್ದು, ಉತ್ತಮ ಶಿಕ್ಷಣ ವ್ಯವಸ್ಥೆಗೆ ಸಹಕಾರಿಯಾಗಲಿದೆ ಎಂದು ಮೋದಿ ತಿಳಿಸಿದರು.