ನವದೆಹಲಿ : ಬೆಳಕಿನ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಸೇರಿದಂತೆ ಅನೇಕ ಗಣ್ಯರು ಸರ್ವರಿಗೂ ಶುಭಾಶಯ ಕೋರಿದ್ದಾರೆ.
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಈ ಬಾರಿ ದೀಪಾವಳಿ ಸಂತೋಷ ತರುವುದರ ಜತೆಗೆ ನಿಮ್ಮ ಜೀವನ ಬೆಳಗಲಿ. ಎಲ್ಲರೂ ಸಮೃದ್ಧ ಮತ್ತು ಆರೋಗ್ಯವಾಗಿ ಇರಲು ಪ್ರಾರ್ಥಿಸುತ್ತೇನೆ ಅಂತಾ ಪಿಎಂ ಮೋದಿ ಶುಭ ಕೋರಿದ್ದಾರೆ.
ಅದರಂತೆ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಮತ್ತು ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಗಡಿಯಲ್ಲಿ ರಾಷ್ಟ್ರವನ್ನು ಕಾಪಾಡುವ ಸೈನಿಕರಿಗೆ ಧನ್ಯವಾದ ಸಲ್ಲಿಸುವ ಸಲುವಾಗಿ ದೀಪಾವಳಿಯಂದು ದೀಪ ಬೆಳಗಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ.
ಇಂದು ಪ್ರಧಾನಿ ಮೋದಿ ಗಡಿ ಪ್ರದೇಶಕ್ಕೆ ತೆರಳಿ ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆ ರಾಜಸ್ಥಾನದ ಜೈಸಲ್ಮೇರ್ ಹಾಗೂ ಗುಜರಾತಿನ ಭುಜ್ನಲ್ಲಿ ಪ್ರಧಾನಿ ಅವರನ್ನ ಸ್ವಾಗತಿಸಲು ಸಕಲ ಸಿದ್ಧತೆಗಳು ನಡೆಯುತ್ತಿದೆ.
ದೀಪಾವಳಿ ಅತ್ಯಂತ ಜನಪ್ರಿಯ ಹಿಂದೂ ಹಬ್ಬಗಳಲ್ಲಿ ಒಂದು. ಕತ್ತಲೆಯ ವಿರುದ್ಧ ಬೆಳಕಿನ ಜಯ, ಕೆಟ್ಟದ್ದರ ವಿರುದ್ಧ ಒಳ್ಳೇಯತನ ಮತ್ತು ಅಜ್ಞಾನದ ಮೇಲಿನ ಜ್ಞಾನದ ಜಯವನ್ನು ಇದು ಪ್ರತಿನಿಧಿಸುತ್ತದೆ. ದೀಪಾವಳಿಯಂದು ಜನರು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಮಾತೆ ಲಕ್ಷ್ಮಿಯನ್ನು ಪೂಜಿಸುತ್ತಾರೆ.
ದೇಶದ ಕೆಲ ಭಾಗಗಳಲ್ಲಿ, ರಾಮನು ರಾವಣನನ್ನು ಕೊಂದು ಅಯೋಧ್ಯಗೆ ವಾಪಸಾಗಿ ಮರಳಿ ಆಡಳಿತ ಪುನಾರಂಭಿಸಿದ ದಿನ ಎಂದು ಆಚರಣೆ ಮಾಡುತ್ತಾರೆ.