ಭರತ್‌ಪುರ(ರಾಜಸ್ಥಾನ): ಅಪ್ರಾಪ್ತ ಬಾಲಕನೋರ್ವನನ್ನು ಬಂದೂಕುಧಾರಿಯೊಬ್ಬ ಗುಂಡಿಕ್ಕಿ ಕೊಂದ ಘಟನೆ ರಾಜಸ್ಥಾನದ ಭರತ್‌ಪುರದಲ್ಲಿ ನಡೆದಿದೆ.
ಮೃತ ಬಾಲಕನನ್ನು ಚೇತ್ರಂ ಸೈನಿ ಎಂದು ಗುರುತಿಸಲಾಗಿದೆ. ಬಾಲಕನ ಜೊತೆ ಇದ್ದ ಆತನ ಚಿಕ್ಕಪ್ಪ ಪ್ರಭು ಎಂಬುವವರೂ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತ ಬಾಲಕ ಹಾಗೂ ಚಿಕ್ಕಪ್ಪ ಇಬ್ಬರೂ ಬಾರ್ಖೇಡಾ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಮೇವಂತ್ ಎಂಬಲ್ಲಿ ಘಟನೆ ಸಂಭವಿಸಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಸ್ಪತ್ರೆಯಲ್ಲಿ ಸೈನಿ ಕೊನೆಯುಸಿರೆಳೆದಿದ್ದಾನೆ. ಸೈನಿ ಕಸ್ಬಾದಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದ ಎನ್ನಲಾಗಿದೆ.
ಹಲ್ಲೆಕೋರರು ಮೋಟಾರ್ ಸೈಕಲ್‌ನಲ್ಲಿ ಆಗಮಿಸಿದ್ದಾರೆ. ಘಟನೆಯಿಂದಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಘಟನೆ ನಡೆದ ಸ್ಥಳದ ಸುತ್ತಲಿನ ಪ್ರದೇಶದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ.
ಪೊಲೀಸ್ ಆಯುಕ್ತ ಲಾಲ್ ಮೀನಾ, ಉಪ ಪೊಲೀಸ್ ಅಧೀಕ್ಷಕ (ಡಿಎಸ್ಪಿ) ಪ್ರದೀಪ್ ಯಾದವ್ ಮತ್ತು ಇತರ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಆದರೆ ದಾಳಿಯ ಉದ್ದೇಶ ಇನ್ನೂ ತಿಳಿದು ಬಂದಿಲ್ಲ.
ಮೇವಂತ್‌ನಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಿವೆ. ಭರತ್‌ಪುರದ ವ್ಯಾಪ್ತಿಯಲ್ಲಿ ಹೊಸದಾಗಿ ಪೊಲೀಸ್ ಅಧಿಕಾರಿ ನೇಮಕಗೊಂಡಿದ್ದಾರೆ. ಈ ತಿಂಗಳ ಆರಂಭದಲ್ಲಿ ನಡೆದ ವಿವಾಹ ಸಮಾರಂಭವೊಂದರ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದ ಅತಿಥಿಯೊಬ್ಬರು ಪರವಾನಗಿ ಇಲ್ಲದ ಗನ್ನಿಂದ ಗುಂಡು ಹಾರಿಸಿದ್ದರು. ಅದು ಅಪ್ರಾಪ್ತ ವಯಸ್ಕನೋರ್ವನ ಪ್ರಾಣವನ್ನೇ ಕಿತ್ತುಕೊಂಡಿತ್ತು ಎಂದು ಹೇಳುತ್ತಾರೆ ಸ್ಥಳೀಯರು.