ಅನಂತನಾಗ್ (ಜಮ್ಮು ಕಾಶ್ಮೀರ): ಭಯೋತ್ಪಾದಕರು ಹಾಗೂ ಸೇನೆಯ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಭಯೋತ್ಪಾದಕರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆ ವೆರಿನಾಗ್ ಅರಣ್ಯ ಪ್ರದೇಶದಲ್ಲಿ ಬೆಳಗ್ಗೆಯಿಂದ ಗುಂಡಿನ ಚಕಮಕಿ ನಡೆಯುತ್ತಿದೆ.
ವರದಿಗಳು ಹೇಳುವಂತೆ ಜಮ್ಮು ಕಾಶ್ಮೀರ ಪೊಲೀಸರು, ಸೇನೆ ಹಾಗೂ ಸಿಆರ್ಪಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಭಯೋತ್ಪಾದಕರಿರುವ ನಿಖರ ಮಾಹಿತಿ ಹಿನ್ನೆಲೆಯಲ್ಲಿ ನಡೆಸುತ್ತಿದ್ದ ಕಾರ್ಯಾಚರಣೆ ವೇಳೆ ಗುಂಡಿನ ಚಕಮಕಿ ನಡೆದಿದೆ.
ಅವಿತುಕೊಂಡಿರುವ ಉಗ್ರರಿಂದ ಸೇನೆಯ ಕಡೆಗೆ ಗುಂಡು ಹಾರಿಸಲಾಗುತ್ತಿದ್ದು, ಸೇನೆಯಿಂದಲೂ ಕೂಡಾ ಭಾರಿ ಪ್ರತ್ಯುತ್ತರ ನೀಡಲಾಗುತ್ತಿದೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.