ಮೊಡಾಸಾ (ಗುಜರಾತ್) : ಹಲವು ಫ್ಯಾಶನ್ ಹಾಗೂ ಟ್ರೆಂಡಿಂಗ್ನಲ್ಲಿ ಮುಳುಗಿರುವ ಯುವ ಸಮೂಹ ಏನಾದರೊಂದು ಮಾಡುತ್ತಲೇ ಇರುತ್ತದೆ. ಹಾಗೆ ಇಲ್ಲೊಬ್ಬ ಬಾಲೆ ತನ್ನ ಉದ್ದನೆ ಕೂದಲು ಬೆಳೆಸಿಕೊಳ್ಳುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಹ್ಯಾಟ್ರಿಕ್ ಮಾಡಿದ್ದಾಳೆ.
ಬಾಬ್ ಕಟ್ ಅದು ಇದು ಎಂದು ಕೇಶ ವಿನ್ಯಾಸದಲ್ಲಿ ಹಲವು ಫ್ಯಾಶನ್ಗಳನ್ನು ಮಾಡಿಕೊಂಡು ಓಡಾಡುವ ಸುರಸುಂದರಿಯ ನಡುವೆ ಗುಜರಾತ್ನ ಅರಾವಳ್ಳಿ ಜಿಲ್ಲೆಯ ಮೊಡಾಸಾದ ನೀಲಂಶಿ ಪಟೇಲ್ ಉದ್ದನೆಯ ಕೂದಲು ಬೆಳೆಸಿ ಗಿನ್ನೆಸ್ ದಾಖಲೆ ಬರೆದಿದ್ದಾಳೆ. ಅದು ಮೂರನೇ ಸಲ!
ವಿಶ್ವದ ಅತಿ ಉದ್ದನೆಯ ಕೇಶರಾಶಿ ಬೆಳೆಸಿಕೊಂಡಿರುವ ಹದಿಹರೆಯದ ಯುವತಿ ನೀಲಂಶಿ ಪಟೇಲ್ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಹ್ಯಾಟ್ರಿಕ್ ದಾಖಲೆ ಮಾಡುವ ಮೂಲಕ ಈಗ ಮತ್ತೆ ಗಮನ ಸೆಳೆದಿದ್ದಾಳೆ.
ಸತತ ಮೂರನೇ ಬಾರಿಗೆ ಗಿನ್ನೆಸ್ ರೆಕಾರ್ಡ್ ಮಾಡಿರುವ ನೀಲಂಶಿ ಪಟೇಲ್, ಉದ್ದನೆಯ ಕೇಶರಾಶಿ ಹೊಂದಿದ್ದರಿಂದ 2018 ರಲ್ಲಿಯೇ ಮೊದಲ ಬಾರಿಗೆ ತಮ್ಮ ದಾಖಲೆ ಬರೆದಿದ್ದರು.
ತಮ್ಮ ದಾಖಲೆ ಉಳಿಸಿಕೊಂಡು ಬಂದಿರುವ ನೀಲಂಶಿ, ಮೂರು ವರ್ಷಗಳಲ್ಲಿ ಮತ್ತೆ ಒಂದು ಅಡಿಗಳಷ್ಟು ಕೂದಲು ಬೆಳೆದಿದೆ ಎನ್ನಲಾಗುತ್ತಿದೆ. ಮೊದಲು 5 ಅಡಿ 7 ಇಂಚು ಉದ್ದವಿದ್ದ ಕೂದಲು ಈಗ 6 ಅಡಿ 7 ಇಂಚಾಗಿವೆ.
ಪ್ರತಿಯೊಬ್ಬ ಯುವತಿಯರು ಏನು ಮಾಡುತ್ತಾರೋ ಅದನ್ನೇ ನಾನು ಮಾಡುತ್ತೇನೆ ಎಂದು ತಮ್ಮ ಕೂದಲು ಬೆಳೆವಣಿಗೆ ಬಗ್ಗೆ ಹಾಗೆಯೇ ಸತತ ಮೂರನೇ ಬಾರಿಗೆ ಗಿನ್ನೆಸ್ ರೆಕಾರ್ಡ್ ಮಾಡಿದ್ದರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ನೀಲಂಶಿ, ಅಧ್ಯಯನದಲ್ಲಿ ಕೂಡ ಮುಂದಿದ್ದಾಳೆ. ಸಾಲದೆಂಬಂತೆ ಆಟೋಟದಲ್ಲಿ ಮಿಂಚು ಹರಿಸಿದ್ದಾಳೆ.