ವಡೋದರಾ (ಗುಜರಾತ್): ವಡೋದರಾ ಜಿಲ್ಲೆಯ ಮಕರಪುರದಲ್ಲಿ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯೊಬ್ಬಳು ತನ್ನ ಶಿಕ್ಷಕರಿಂದ 'ಉತ್ತಮ ಸ್ಪರ್ಶ, ಕೆಟ್ಟ ಸ್ಪರ್ಶ' ಕುರಿತು ಪಾಠಗಳನ್ನು ಸ್ವೀಕರಿಸುವಾಗ ಅಳಲು ಪ್ರಾರಂಭಿಸಿದಾಗ ಆರೋಪಿಯ ದುಷ್ಕೃತ್ಯಗಳು ಬೆಳಕಿಗೆ ಬಂದಿವೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಉಪ ಪೊಲೀಸ್ ಆಯುಕ್ತ ಲಖದೀರ್ ಸಿಂಗ್ ಅವರು, ಹುಡುಗಿಯೊಬ್ಬಳು 'ಉತ್ತಮ ಸ್ಪರ್ಶ, ಕೆಟ್ಟ ಸ್ಪರ್ಶ' ಕುರಿತು ಪಾಠಗಳನ್ನು ಕೇಳುತ್ತಾ ಅಳಲು ಆರಂಭಿಸಿದಳು. ಆಗ ಶಿಕ್ಷಕರು ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.
ಮಾಹಿತಿ ಪಡೆದ ಪೊಲೀಸರು ತನಿಖೆ ಕೈಗೊಂಡಾಗ ರಜನಿಕಾಂತ್ ಮಹತೋ ಎಂಬ ವ್ಯಕ್ತಿ ಮೂವರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ತಿಳಿದುಬಂದಿದೆ. ರಜನಿಕಾಂತ್, ಬಾಲಕಿಯರಿಗೆ ಸಿಹಿತಿಂಡಿ ಮತ್ತು ಚಾಕೊಲೇಟ್‌ಗಳನ್ನು ನೀಡುವ ಮೂಲಕ ತನ್ನ ಮನೆಗೆ ಕರೆದೊಯ್ಯುತ್ತಿದ್ದ. ಬಳಿಕ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನೆಂದು ವಿಚಾರಣೆ ವೇಳೆ ತಪ್ಪೊಪ್ಪೊಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಜನಿಕಾಂತ್ ಮಹತೋನನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಜೊತೆಗೆ ಈತ ಇನ್ಯಾರ ಮೇಲಾದರೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಯೇ ಎಂಬ ಕುರಿತು ತನಿಖೆ ಮುಂದುವರೆಸಿದ್ದಾರೆ.