ಅಹಮದಾಬಾದ್: ರಾಜ್ಯಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಐವರು ಮಾಜಿ ಶಾಸಕರು ಇಂದು ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.
ಕಾಂಗ್ರೆಸ್ನ ಮಾಜಿ ಶಾಸಕರಾದ ಜಿತು ಚೌಧರಿ, ಪ್ರದ್ಯುಮ್ನಸಿಂಹ ಜಡೇಜಾ, ಜೆ.ವಿ ಕಾಕಾಡಿಯಾ, ಅಕ್ಷಯ್ ಪಟೇಲ್ ಮತ್ತು ಬ್ರಿಜೇಶ್ ಮೆರ್ಜಾ ಇಂದು ಬಿಜೆಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಜಿತು ವಾಘನಿ ಮತ್ತು ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಕಮಲ ಮುಡಿದರು. ರಾಜ್ಯಸಭೆ ಚುನಾವಣೆ ವೇಳೆ ಒಟ್ಟು 8 ಕಾಂಗ್ರೆಸ್ ಮುಖಂಡರು ಪಕ್ಷ ತೊರೆದಿದ್ದರು.
ಪಟೇಲ್, ಮಿರ್ಜಾ ಹಾಗೂ ಔಧರಿ ರಾಜ್ಯಸಭೆ ಎಲೆಕ್ಷನ್ ಘೋಷಣೆಯಾಗುವುದಕ್ಕೂ ಮುಂಚಿತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ, ಕಾಕಾಡಿಯಾ, ಹಾಗೂ ಜಡೇಜಾ ಮಾರ್ಚ್ ತಿಂಗಳಲ್ಲಿ ಶಾಸಕ ಸ್ಥಾನ ತೊರೆದಿದ್ದರು.
ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಸಮಸ್ಯೆ, ನಾಯಕತ್ವದ ಕೊರತೆಯಿಂದಾಗಿ ಅವರು ಬಿಜೆಪಿ ಸೇರಿಕೊಂಡಿದ್ದು, ಗುಜರಾತ್ನಲ್ಲಿ ಬರುವ ದಿನಗಳಲ್ಲಿ ಕಾಂಗ್ರೆಸ್ ತನ್ನ ಅಂಗಡಿ ಮುಚ್ಚಲಿದೆ ಎಂದಿದ್ದಾರೆ. ಜೂನ್ 19ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ 1 ಸ್ಥಾನ ಗೆದ್ದಿದೆ.