ನವದೆಹಲಿ: ದೇಶಾದ್ಯಂತ ಇಂದು ಸಡಗರ-ಸಂಭ್ರಮದ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಣತಂತ್ರದ ಅಂಗವಾಗಿ ಆಕರ್ಷಕ ಪಥ ಸಂಚಲನ, ಸೇನೆಗಳ ಶಕ್ತಿ ಪ್ರದರ್ಶನ ನಡೆಯಲಿದೆ.
ಬೆಳಗ್ಗೆ 9ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೆಂಪು ಕೋಟೆ ಮೇಲೆ ಧ್ವಜಾರೋಹಣ ಮಾಡಲಿದ್ದು, ಇದಾದ ಬಳಿಕ ವಿವಿಧ ರಾಜ್ಯಗಳ ಸ್ತಬ್ಧ ಚಿತ್ರಗಳು ವಿಜಯ ಚೌಕ್ನಿಂದ ರಾಜಪಥದ ಮೂಲಕ ಸಾಗಿ ತಿಲಕ್ ಮಾರ್ಗ್, ಭದೂರ್ ಶಾ ಜಾಫರ್ ಮಾರ್ಗ, ನೇತಾಜಿ ಮಾರ್ಗದ ತನಕ ಮೆರವಣಿಗೆ ಸಾಗಲಿವೆ. ಈ ವೇಳೆ ಭಾರತೀಯ ನೌಕಾಸೇನೆ, ವಾಯುಸೇನೆ ಮತ್ತು ಭೂ ಸೇನೆಯ ಪ್ರಾಮುಖ್ಯ ತೋರುವ ಪ್ರಾತ್ಯಕ್ಷಿಕೆಗಳ ಅನಾವರಣವಾಗಲಿದೆ.
ಬಸವಣ್ಣನವರ ಅನುಭವ ಮಂಟಪದ ಸ್ತಬ್ಧ ಚಿತ್ರ ಈ ಬಾರಿ ರಾಜ್ಯವನ್ನು ಪ್ರತಿನಿಧಿಸಲಿದ್ದು 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ ಕ್ರಾಂತಿ ಮಾಡಿದ್ದ ಬಸವಣ್ಣ ನವರ ಪರಿಕಲ್ಪನೆ ರಾಜಪಥ್ ರಸ್ತೆಯಲ್ಲಿ ಅನಾವರಣಗೊಳ್ಳಲಿದೆ.
ಇಂದಿನ ಗಣರಾಜ್ಯೋತ್ಸವದಲ್ಲಿ ವಿಶೇಷ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸನಾರೋ ಆಗಮಿಸಿದ್ದು, ಪೊಲೀಸ್ ಬಿಗಿ ಬದೋಬಸ್ತ್ ಮಾಡಲಾಗಿದೆ. ದೆಹಲಿಯಲ್ಲಿ ಒಟ್ಟು 22 ಸಾವಿರ ದೆಹಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಿದ್ದು ರಾಜಪಥ್ ರಸ್ತೆ ಸುತ್ತಲೂ 10 ಸಾವಿರ ಪೊಲೀಸ್ ಭದ್ರತೆ ಒದಗಿಸಿದ್ದಾರೆ.