ನವದೆಹಲಿ: ಹಳ್ಳಿ, ಗ್ರಾಮ, ಹೋಬಳಿ, ತಾಲೂಕು... ಇವು ಸುಂದರ ಹಾಗೂ ಸ್ವಸ್ಥ ಭಾರತದ ಅಭಿವೃದ್ಧಿಯ ಅಡಿಗಲ್ಲು. ಈ ಮಾತನ್ನ 18-19ರ ಶತಮಾನದಲ್ಲೇ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಿಡಿಸಿ ಹೇಳಿದ್ದರು. ಒಂದು ದೇಶದ ಅಭಿವೃದ್ಧಿ ಆರಂಭವಾಗೋದು ಸಣ್ಣ - ಸಣ್ಣ ಗ್ರಾಮಗಳಿಂದಲೇ ಹೊರತು ನಗರಗಳಿಂದಲ್ಲ. ಭಾರತದ ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಗಳ ಮೇಲಿನ ಗಾಂಧಿಯ ಪ್ರತಿ ಕಲ್ಪನೆಗಳಿಗೂ ಗ್ರಾಮವೇ ಕೇಂದ್ರವಾಗಿತ್ತು. ಅಲ್ಲಿ ಎಲ್ಲದಕ್ಕೂ ಗ್ರಾಮವೇ ಮುಖ್ಯ. ರಾಜಪ್ರಭುತ್ವಕ್ಕೆ ಅಲ್ಲಿ ಮನ್ನಣೆಯೇ ಇಲ್ಲ. ಪ್ರಜೆಯೇ ಅಲ್ಲಿ ಎಲ್ಲ. ಅಲ್ಲಿ ಪ್ರಜೆಯೇ ರಾಜ. ಆತನೇ ಆಡಳಿತದ ಯಂತ್ರ ಕೂಡಾ. ಯಾವ ಪ್ರಜೆಯೂ ಮೂರನೇ ವ್ಯಕ್ತಿಯನ್ನ ಅವಲಂಬಿಸಬೇಕಾದ ಅಗತ್ಯವೇ ಇಲ್ಲ. ಇದು ನಮ್ಮ ರಾಷ್ಟ್ರಪಿತ ಕಂಡ ಗ್ರಾಮ ಸ್ವರಾಜ್ಯ.
ದೇಶದ ಅಧಿಕಾರದ ಯಂತ್ರವನ್ನು ರಾಜಾರೋಷವಾಗಿ ಬೆರಳೆಣಿಕೆಯಷ್ಟು ಮಂದಿ ಮಾತ್ರವೇ ಸ್ವಾಧೀನಪಡಿಸಿಕೊಳ್ಳೋದು ಮಹಾತ್ಮನಿಗೆ ಇಷ್ಟವಿರಲಿಲ್ಲ. ಬದಲಾಗಿ ಪ್ರಜಾಪ್ರಭುತ್ವವು ರಾಜಪ್ರಭುತ್ವವಾಗಿ ಅಧಿಕಾರದ ದುರುಪಯೋಗವಾದಾಗ ಅದನ್ನು ವಿರೋಧಿಸುವ ಸಾಮರ್ಥ್ಯವನ್ನು ಎಲ್ಲರೂ ಪಡೆದುಕೊಳ್ಳುವುದೇ ಮಹಾತ್ಮ ಕಂಡ ಗ್ರಾಮ ಸ್ವರಾಜ್ಯ. ಸ್ವರಾಜ್ಯ ಎಂದರೆ ಸ್ವಯಂ ಆಡಳಿತ ಮತ್ತು ಸ್ವಯಂ ನಿರ್ಬಂಧ. ಹಾಗಂತ ಎಲ್ಲ ನಿರ್ಬಂಧಗಳಿಂದ ಸ್ವಾತಂತ್ರ್ಯವಲ್ಲ. ಗಾಂಧೀಜಿಯವರು ಹೇಳುವಂತೆ ಜನಸಾಮಾನ್ಯರಿಗೆ ಅವರದೇ ಸಾಮರ್ಥ್ಯದ ಆಧಾರದ ಮೇಲೆ ಅಧಿಕಾರವನ್ನು ನಿಯಂತ್ರಿಸಲು ಹಾಗೂ ಆಡಳಿತ ಯಂತ್ರವನ್ನು ಮುಂದುವರಿಸಲು ಅವಕಾಶ ನೀಡುವುದೇ ಗ್ರಾಮ ಸ್ವರಾಜ್ಯ.
ಆಡಳಿತ ವಿಕೇಂದ್ರೀಕರಣ ಪದ್ಧತಿಯಲ್ಲಿ ಗ್ರಾಮ ಅಥವಾ ಹಳ್ಳಿಗಳು ಕಟ್ಟ ಕಡೇಯ ಹಾಗೂ ಸಣ್ಣ ಘಟಕವಾಗಿದ್ದು, ಈ ಮೂಲಕ ರಾಜಕೀಯವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಬಡವ-ಬಲ್ಲಿದನೆನ್ನದೆ ಮಹಿಳೆಯರೂ ಸೇರಿ ಪ್ರತಿಯೊಬ್ಬ ನಾಗರಿಕನೂ ಪಾಲ್ಗೊಳ್ಳಲು ಸಾಧ್ಯವಾಗುತ್ತೆ. ಗ್ರಾಮಗಳಲ್ಲಿ ರಚಿಸಲಾಗುವ ಈ ಪಂಚಾಯಿತಿಗಳಿಂದ ಹಳ್ಳಿಯ ಆರ್ಥಿಕ ಅಭಿವೃದ್ಧಿಗೆ ಸ್ಥಳೀಯ ಸಂಪನ್ಮೂಲಗಳನ್ನು ಸರಿಯಾಗಿ ಗುರುತಿಸಿ, ಸೂಕ್ತವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಗ್ರಾಮಸ್ವರಾಜ್ಯದ ಪ್ರಮುಖ ಭಾಗವಾದ ಗ್ರಾಮವು, ಭಾಗವಹಿಸುವಿಕೆ ಪ್ರಜಾಪ್ರಭುತ್ವದ ಮೂಲ ಸಂಸ್ಥೆಯಾಗಿದ್ದು, ಇದರಿಂದಾಗಿ ಆರ್ಥಿಕ ಸ್ವಾಯತ್ತತೆಯೂ ಸಾಧ್ಯವಾಗುತ್ತದೆ.
ಸ್ಮಾರ್ಟ್ ಸಿಟಿ ಬಂತು, ಸ್ಮಾರ್ಟ್ ವಿಲೇಜ್ ಯಾವಾಗ!
ಒಟ್ಟಿನಲ್ಲಿ ಹಳೆಯ ಗ್ರಾಮವನ್ನು ಮತ್ತೆ ಕಟ್ಟುವುದಷ್ಟೇ ಗಾಂಧಿಯ ಕನಸಿನ ಸ್ವಾರಾಜ್ಯವಲ್ಲ. ಬಟ್ಟೆ, ನೀರು, ಆಹಾರ, ಶಿಕ್ಷಣ, ವಸತಿ ಸೇರಿದಂತೆ ಇನ್ನಿತರ ಮೂಲಬೂತ ಅವಶ್ಯಕತೆಗಳಲ್ಲಿ ಸ್ವಾವಲಂಬನೆ ಸಾಧಿಸುವುದೇ, ಗಾಂಧಿಯ ಗ್ರಾಮ ಪುನರ್ನಿರ್ಮಾಣದ ಮೂಲಭೂತ ಷರತ್ತು. ಸರಳವಾಗಿ ಹೇಳುವುದಾದರೆ, ಒಂದು ದೇಶಕ್ಕೆ ಗ್ರಾಮವೇ ಎಲ್ಲ. ಗ್ರಾಮದಿಂದಲೇ ಎಲ್ಲ. 'ಗ್ರಾಮಭಾರತ'ದ ಆಶಯಗಳು ಬದುಕಿದರೆ 'ಗ್ರಾಮ ಸ್ವರಾಜ್ಯ' ಸುಲಭ ಸಾಧ್ಯ. ಆದ್ರೆ ಪ್ರಸ್ತುತ ಕಾಲಘಟ್ಟದಲ್ಲಿ ಸ್ಮಾರ್ಟ್ ಸಿಟಿ ನಮ್ಮಲ್ಲಿ ಅಸ್ತಿತ್ವದಲ್ಲಿದ್ದರೂ, ಸ್ಮಾರ್ಟ್ ವಿಲೇಜ್ ನಿರ್ಮಾಣಕ್ಕಾಗಿ ದಿನಗಣನೆ ಇನ್ನೂ ಆರಂಭಗೊಂಡಿಲ್ಲ ಅನ್ನೋದೇ ವಿಪರ್ಯಾಸ.
- ರಾಜೀವ್ ರಜನ್