ನವದೆಹಲಿ: ದೇಶದಲ್ಲಿ ಮೊದಲ ಬಾರಿಗೆ ವಲ್ಲಭಾಭಾಯ್ ಪಟೇಲ್ ಅವರ ಏಕತಾ ಪ್ರತಿಮೆ ಸ್ಥಳದಿಂದ ಸಬರಮತಿ ನದಿ ಮುಂಭಾಗಕ್ಕೆ ಸೀಪ್ಲೇನ್ ಸೇವೆ ಆರಂಭಿಸಿದ ಬಳಿಕ ಇದೀಗ ಯಮುನಾ ನದಿಯ ಸರದಿ. ಯಮುನಾ ನದಿ ಮುಂಭಾಗ ಸೀಪ್ಲೇನ್ ಆರಂಭಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದು, ಸಾಗರಮಾಲ ಸೀಪ್ಲೇನ್ ಸರ್ವೀಸ್(ಎಸ್‌ಎಸ್‌ಪಿಎಸ್) ಅಡಿ ಇಒಐ ಸಲ್ಲಿಸುವಂತೆ ವಿಮಾನ ಸಂಸ್ಥೆಗಳನ್ನು ಆಹ್ವಾನಿಸಿದೆ.
ದೆಹಲಿಯಿಂದ ತೆಹ್ರಿ, ದೆಹಲಿ-ಶ್ರೀನಗರ, ಮುಂಬೈ-ಶಿರಡಿ, ಮುಂಬೈ-ಲೊನವಾಲಾ, ಸೂರತ್-ದ್ವಾರಕ, ಸೂರತ್-ಮಾಂಡ್ವಿ, ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಲಕ್ಷದ್ವೀಪಕ್ಕೆ ಸೀಪ್ಲೇನ್ ಸೇವೆ ಒದಗಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.
ಸೀಪ್ಲೇನ್ ಸೇವೆ ಒದಗಿಸಲು ಆಸಕ್ತಿ ಹೊಂದಿರುವ ವಿಮಾನಯಾನ ಸಂಸ್ಥೆಗಳು ಜನವರಿ 22ರೊಳಗೆ ಅರ್ಜಿ ಸಲ್ಲಿಸುವಂತೆ ಬಂದರು, ಹಡಗು ಮತ್ತು ಜಲ ಮಾರ್ಗ ಸಚಿವಾಲಯ ತಿಳಿಸಿದೆ. ಭಾರತದಲ್ಲಿ ಸಾಗರಮಾಲ ಸೀಪ್ಲೇನ್ ಸೇವೆ ಅಭಿವೃದ್ಧಿ ಪಡಿಸುವ ಸಲುವಾಗಿ ಸಾಗರಮಾಲ ಅಭಿವೃದ್ಧಿ ಕಂಪನಿ ನಿಯಮಿತ(ಎಸ್‌ಡಿಸಿಎಲ್) ಸಹಯೋಗದೊಂದಿಗೆ ವಿಶೇಷ ಉದ್ದೇಶಕ್ಕಾಗಿ ವಾಹನ(ಎಸ್‌ಪಿವಿ) ರಚನೆಗೆ ತೀರ್ಮಾನಿಸಿದೆ.
ಓದಿ: ಯುವಕರೇ, ಮುಂದೆ ಬರುವ ಹೇರಳ ಅವಕಾಶಗಳಿಗೆ ಈಗಲೇ ಸಿದ್ಧರಾಗಿ : ಪ್ರಧಾನಿ ಮೋದಿ ಕರೆ
ಈ ವಿಶೇಷ ಸೇವೆಯ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಎಸ್‌ಪಿವಿ ನೋಡಿಕೊಳ್ಳಲಿದ್ದು, ಸೀಪ್ಲೇನ್‌ಗಳಿಗೆ ಬೇಕಾದಂತಹ ಮೂಲಭೂತ ಸೌಲಭ್ಯಗಳು, ಪಾರ್ಕಿಂಗ್ ಸ್ಥಳ ಹಾಗೂ ಇತರೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಿದೆ.