ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದ ಸಂಕಷ್ಟವನ್ನ ಗಮನದಲ್ಲಿಟ್ಟುಕೊಂಡು ಆದಾಯ ತೆರಿಗೆ ಇಲಾಖೆ ರಿಟರ್ನ್ಸ್ ಸಲ್ಲಿಸಲು ಹಾಗೂ ತೆರಿಗೆ ಪಾವತಿ ಮತ್ತಷ್ಟು ಸರಳಗೊಳಿಸಲು ಮುಂದಾಗಿದೆ.
ಈ ಸಲುವಾಗಿ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 2018-19ನೇ ಹಣಕಾಸು ವರ್ಷಕ್ಕೆ (ಎವೈ 2019-) ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದ್ದ ನಿಗದಿತ ದಿನಾಂಕವನ್ನು ವಿಸ್ತರಿಸಿದೆ. ಜುಲೈ 31 ರವರೆಗೆ ಐಟಿ ರಿಟರ್ನ್ಸ್ ಸಲ್ಲಿಸಲು ಇದ್ದ ಗಡುವನ್ನ ಸೆಪ್ಟೆಂಬರ್ 30ಕ್ಕೆ ವಿಸ್ತರಿಸಲಾಗಿದೆ.
ಈ ಕುರಿತು ಹಣಕಾಸು ಸಚಿವಾಲಯ ಬುಧವಾರ ಅಧಿಸೂಚನೆ ಹೊರಡಿಸಿದೆ. 2018-19ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಸರ್ಕಾರ ಬುಧವಾರ ಸೆಪ್ಟೆಂಬರ್ 30 ರವರೆಗೆ ಎರಡು ತಿಂಗಳುಗಳ ಕಾಲ ವಿಸ್ತರಿಸಿದೆ. "ಈ ಅಧಿಸೂಚನೆಯು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರಲಿದೆ" ಎಂದು ತೆರಿಗೆ ನೀತಿ ಮತ್ತು ಶಾಸನ ವಿಭಾಗದ ಉಪ ಕಾರ್ಯದರ್ಶಿ ನೀರಜ್ ಕುಮಾರ್ ಹೇಳಿದ್ದಾರೆ.