ನವದೆಹಲಿ: ಎರಡನೇ ಅವಧಿಗೆ ದಿಲ್ಲಿ ಗದ್ದುಗೆಗೇರಿದ ಬಿಜೆಪಿ ಸರ್ಕಾರ ನವ ಶಿಕ್ಷಣ ನೀತಿ ಮೂಲಕ ಹಿಂದಿ ಹೇರಿಕೆ ಮಾಡಲಿದೆ ಎಂಬ ಆತಂಕ ದೂರವಾಗಿದೆ. ಇಂತಹ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಸ್ಪಷ್ಟಪಡಿಸಿದ್ದಾರೆ.
ಯಾರೂ ಮೇಲೂ, ಯಾವುದೇ ಭಾಷೆಯನ್ನು ಹೇರುವ ಉದ್ದೇಶ ನಮಗಿಲ್ಲ. ಭಾರತದ ಎಲ್ಲಾ ಭಾಷೆಗಳನ್ನೂ ಮುನ್ನೆಲೆಗೆ ತರುವ ಉದ್ದೇಶ ಮೋದಿ ಸರ್ಕಾರದ್ದು. ಈ ರೀತಿಯಾದ ಕರಡನ್ನು ಸಮಿತಿ ಸಿದ್ಧಪಡಿಸಿದ್ದು, ಜನಭಿಪ್ರಾಯ ಪಡೆದ ನಂತರವೇ ಸರ್ಕಾರ ಈ ಬಗ್ಗೆ ನಿರ್ಧಾರ ಮಾಡಲಿದೆ ಎಂದು ಜಾವ್ಡೇಕರ್ ಹೇಳಿಕೆ ನೀಡಿದ್ದಾರೆ.
ಹೊಸ ಶಿಕ್ಷಣ ನೀತಿಯ ಬಗ್ಗೆ ವರದಿಯೊಂದು ಸಲ್ಲಿಕೆಯಾಗಿದೆ. ಇನ್ನೂ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಂಡಿದೆ ಎಂಬುದು ತಪ್ಪು ತಿಳುವಳಿಕೆ ಎಂದಿದ್ದಾರೆ.
ನವ ಶಿಕ್ಷಣ ನೀತಿಯು ಹಿಂದೆ ಹೇರಿಕೆ ಸಂಬಂಧ ಶಿಫಾರಸು ಮಾಡಿದೆ ಎಂದು ಆರೋಪಿಸಿದ್ದ ತಮಿಳುನಾಡಿನ ಡಿಎಂಕೆ, ಇದರಿಂದ ಭಾಷಾ ಸಮರ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿತ್ತು. ಡಿಎಂಕೆ ನಾಯಕ ಸ್ಟಾಲಿನ್, ಬಿಜೆಪಿ ಸರ್ಕಾರ ತ್ರಿಭಾಷೆ ನೀತಿಯನ್ನು ಕನಸಿನಲ್ಲಿಯೂ ಯೋಚಿಸಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಇದೇ ಆತಂಕ ಇತರೆ ರಾಜ್ಯಗಳಲ್ಲಿ ಇದ್ದು, ಇದೀಗ ಕೇಂದ್ರದ ನಿಲುವನ್ನು ಸಚಿವರು ಸ್ಪಷ್ಟಪಡಿಸಿದ್ದಾರೆ.