ತಿರುನೆಲ್ವೇಲಿ(ತಮಿಳುನಾಡು): ಬಸ್ ಟಿಕೆಟ್ ಹಣ ನೀಡುವಂತೆ ಕೇಳಿದ ಸಾರಿಗೆ ಸಂಸ್ಥೆ ಬಸ್ ಕಂಡಕ್ಟರ್ ಮೇಲೆ ಇಬ್ಬರು ಕರ್ತವ್ಯನಿರತ ಪೊಲೀಸರು ಹಲ್ಲೆ ನಡೆಸಿರುವ ಪ್ರಕರಣ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ನಡೆದಿದೆ.
ತಿರುನೆಲ್ವೇಲಿ-ನಾಗರ್‌ಕೋಯಿಲ್ ರಸ್ತೆ ಮಧ್ಯೆ ಸಂಚರಿಸುವ ಸಾರಿಗೆ ಬಸ್ಗೆ ಇಬ್ಬರು ಕರ್ತವ್ಯನಿರತ ಪೊಲೀಸರು ಹತ್ತಿದ್ದಾರೆ. ಬಸ್ ಹತ್ತಿದ ಮೇಲೆ ಪ್ರತಿಯೊಬ್ಬ ವ್ಯಕ್ತಿಯೂ ಪ್ರಯಾಣಿಕ ಅಷ್ಟೇ.. ಅಂತೆಯೇ ಕಂಡಕ್ಟರ್ ತನ್ನ ಕರ್ತವ್ಯದ ಭಾಗವಾಗಿ ಇಬ್ಬರು ಪೊಲೀಸರ ಬಳಿ ಟಿಕೆಟ್ ಹಣ ಕೇಳಿದ್ದಾನೆ. ಆ ವೇಳೆ ಪ್ರತಿಕ್ರಿಯೆ ನೀಡದ ಪೊಲೀಸರ ಬಳಿ ಮತ್ತೆ ನೆನಪಿಸಿ ಟಿಕೆಟ್ ಹಣ ಕೇಳಿದ್ದಾನೆ. ಬಳಿಕ ಬಸ್ನಲ್ಲಿದ್ದ ಇತರ ಪ್ರಯಾಣಿಕರಲ್ಲೂ ನಿರ್ವಾಹಕ ಹಣ ಕೇಳಿಸಿದ್ದಾನೆ.
ಇಷ್ಟಾದರೂ ಟಿಕೆಟ್ ನೀಡದ ಪೊಲೀಸರ ಬಳಿ ಮತ್ತೆ ನಿರ್ವಾಹಕ ಟಿಕೆಟ್ ನೀಡುವಂತೆ ಕೇಳಿದ್ದಾನೆ. ಈ ವೇಳೆ ದಿಢೀರ್ ಕೋಪಗೊಂಡ ಪೊಲೀಸರು, ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ನಡುವೆ ನಿರ್ವಾಹಕ ರಮೇಶ್ ಮುಖದಲ್ಲಿ ಗಾಯವಾಗಿ ರಕ್ತ ಸುರಿಯಲಾರಂಭಿಸಿದೆ.
ಈ ಬಗ್ಗೆ ನಿರ್ವಾಹಕ, ಇಬ್ಬರು ಪೊಲೀಸರ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಳಿಕ ಇಬ್ಬರು ಪೊಲೀಸರನ್ನು ಬಂಧಿಸಲಾಗಿದ್ದು, ಸದ್ಯ ಇವರಿಬ್ಬರೂ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇನ್ನೊಂದೆಡೆ ಹಲ್ಲೆಗೊಳಗಾದ ರಮೇಶ್ ತಿರುನೆಲ್ವೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.