ನವದೆಹಲಿ: ಕೊರೊನಾ ವೈರಸ್ ಲಾಕ್‌ಡೌನ್ ಮಧ್ಯೆ ಬಾಡಿಗೆದಾರರ ಬಾಡಿಗಯನ್ನು ಮನ್ನಾ ಮಾಡುವಂತೆ ಭೂಮಾಲೀಕರಿಗೆ ಸರ್ಕಾರ ಈ ಹಿಂದೆ ಸೂಚನೆ ನೀಡಿತ್ತು. ಆದರೆ, ಇದೀಗ ಪರವಾನಗಿ ಶುಲ್ಕವನ್ನು ಪಾವತಿಸಲು ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಯಿಂದ ನೋಟಿಸ್ ಬಂದಿದೆ ಎಂದು ನವದೆಹಲಿ ಅಂಗಡಿಯವರ ಒಕ್ಕೂಟ ತಿಳಿಸಿದೆ.
ಲಾಕ್‌ಡೌನ್ ನಿಂದಾಗಿ ಯಾವುದೇ ಅಂಗಡಿ ಮುಗ್ಗಟ್ಟುಗಳು ತೆರೆಯಲು ಅವಕಾಶವಿಲ್ಲ, ಆದ್ದರಿಂದ ಭೂಮಾಲೀಕರು ತಮ್ಮ ಬಾಡಿಗೆದಾರರ ಬಳಿ ಬಾಡಿಗೆ ನೀಡುವಂತೆ ಒತ್ತಾಯಿಸಬೇಡಿ ಎಂದು ಕಳೆದ ತಿಂಗಳು ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಪ್ರಕಟಣೆ ನೀಡಲಾಗಿತ್ತು. ಈ ಪ್ರಕಟಣೆ ನಂತರ ಎನ್‌ಡಿಎಂಸಿ ಪ್ರದೇಶದ ಮಾರುಕಟ್ಟೆಗಳನ್ನು ಮುಚ್ಚಲಾಗಿತ್ತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಭೂಮಾಲೀಕರುಗಳು ಬಾಡಿಗೆದಾರರಿಗೆ ಸ್ವಲ್ಪ ಸಮಯದವರೆಗೆ ವಿನಾಯಿತಿ ನೀಡಬೇಕು ಎಂದು ಹೇಳಿದ್ದರು. ಆದರೆ, ಇದೀಗ ನಮಗೆ ಮುನ್ಸಿಪಲ್ ಕೌನ್ಸಿಲ್ ವತಿಯಿಂದ ನೋಟಿಸ್ ನೀಡಿದ್ದಾರೆ ಹಾಗೂ ಶೇ.10 ರಷ್ಟು ಶುಲ್ಕವನ್ನು ಇದರಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ನವದೆಹಲಿ ಅಂಗಡಿ ಒಕ್ಕೂಟದ ಅಧ್ಯಕ್ಷ ದಿನೇಶ್ ಗೌರ್ ಹೇಳಿದ್ದಾರೆ.
ನಾವು ಲಾಕ್‌ಡೌನ್ ಆದೇಶಗಳನ್ನು ಪಾಲಿಸುತ್ತಿದ್ದೇವೆ. ನಮ್ಮ ಅಂಗಡಿಗಳನ್ನು ಸುಮಾರು ಒಂದು ತಿಂಗಳಿನಿಂದ ಮುಚ್ಚಲಾಗಿದೆ, ಇದರ ಜೊತೆಗೆ ನಾವು ನಮ್ಮ ಸಿಬ್ಬಂದಿಗೆ ಪ್ರತೀ ತಿಂಗಳಿನಂತೆ ಹಣವನ್ನು ಪಾವತಿಸುತ್ತಿದ್ದೇವೆ ಇಂತಹದರಲ್ಲಿ ಬಾಡಿಗೆ ಶುಲ್ಕವನ್ನು ಪಾವತಿಸಬೇಕು ಎಂದರೆ ಕಷ್ಟ ಸಾಧ್ಯ ಎಂದು ಗೌರ್ ಹೇಳಿದ್ದಾರೆ.
ಫೆಡರೇಶನ್ ಪ್ರಕಾರ, ಪಾಲಿಕಾ ಬಜಾರ್, ಪಾಲಿಕಾ ಪ್ಯಾಲೇಸ್, ಸರೋಜ್ನಿ ನಗರ ಮಾರುಕಟ್ಟೆ, ಕಸ್ತೂರಬಾ ನಗರ ಮಾರುಕಟ್ಟೆ ಸೇರಿದಂತೆ 25 ಮಾರುಕಟ್ಟೆಗಳು ಎನ್‌ಡಿಎಂಸಿಯ ವ್ಯಾಪ್ತಿಗೆ ಬರುತ್ತವೆ. ಲಾಕ್‌ಡೌನ್‌ನಿಂದಾಗಿ ಸುಮಾರು 5,000 ಅಂಗಡಿಳ ಬಾಡಿಗೆ ನಷ್ಟವಾಗಿದೆ.