ಮಥುರಾ: ಉತ್ತರ ಪ್ರದೇಶದ ಗೋರಖ್‌ಪುರದ ಅಮಾನತುಗೊಂಡಿರುವ ವೈದ್ಯ ಕಫೀಲ್ ಖಾನ್ ಬರೆದಿರುವ ನಾಲ್ಕು ಪುಟಗಳ ಪತ್ರವೀಗ ಮಥುರಾ ಜೈಲಿನ ಶೋಚನೀಯ ಪರಿಸ್ಥಿತಿ ಬಿಚ್ಚಿಟ್ಟಿದೆ.
ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಬಂಧನಕ್ಕೊಳಗಾಗಿರುವ ಕಫೀಲ್ ಖಾನ್ ಸದ್ಯ ಮಥುರಾ ಜೈಲಿನಲ್ಲಿದ್ದು, ತನ್ನ ಕುಟುಂಬದವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ ಸುಮಾರು 150 ಕೈದಿಗಳು ಒಂದೇ ಶೌಚಾಲಯವನ್ನು ಹಂಚಿಕೊಳ್ಳುತ್ತಿರುವ ಜೈಲಿನ ಚಿತ್ರಣದ ಬಗ್ಗೆ ವಿವರಿಸಿದ್ದಾರೆ.
ಪತ್ರದಲ್ಲೇನಿದೆ?
125 -150 ಕೈದಿಗಳು ಒಂದೇ ಶೌಚಾಲಯ ಬಳಸುತ್ತಿದ್ದು, ಬೆವರು ಮತ್ತು ಮೂತ್ರದ ವಾಸನೆಯಿಂದ ಬದುಕಿದ್ದೂ ನರಕದಲ್ಲಿ ವಾಸಿಸುವಂತಾಗಿದೆ. ಕೆಲವೊಮ್ಮೆ ಆಯತಪ್ಪಿ ಬೀಳುತ್ತೇನೆ ಎಂದು ಅನ್ನಿಸುತ್ತದೆ. ಜೈಲು ಗಬ್ಬು ವಾಸನೆಯಿಂದ ಕೂಡಿದ ಮೀನು ಮಾರುಕಟ್ಟೆಯಂತಾಗಿದೆ. ಕೆಮ್ಮು, ಶೀತಗಳಿಂದ ಕೈದಿಗಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಕೆಲವರು ಜಗಳವಾಡುತ್ತಾರೆ ಎಂದು ಪತ್ರದಲ್ಲಿ ಕಫೀಲ್ ಅಳಲು ತೋಡಿಕೊಂಡಿದ್ದಾರೆ.
ನನಗೆ ಯಾಕೆ ಈ ಶಿಕ್ಷೆ? ನನ್ನ ಹೆಂಡತಿ, ಮಕ್ಕಳು, ತಾಯಿ ಮತ್ತು ಸಹೋದರ-ಸಹೋದರಿಯನ್ನು ನಾನು ಯಾವಾಗ ನೋಡಲು ಸಾಧ್ಯ? ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯನಾಗಿ ನನ್ನ ಕರ್ತವ್ಯಗಳನ್ನು ಯಾವಾಗ ಪೂರೈಸಲು ಸಾಧ್ಯ? ಎಂದೂ ಕೂಡ ವೈದ್ಯ ಪ್ರಶ್ನಿಸಿದ್ದಾರೆ.
ಈ ಪತ್ರವನ್ನು ಜೂನ್ 15 ರಂದು ಕಫೀಲ್ ಬರೆದಿದ್ದು, ಜುಲೈ 1 ರಂದು ನಮಗೆ ತಲುಪಿದೆ. ಇದನ್ನು ಅಂಚೆ ಮೂಲಕ ಕಳುಹಿಸಲಾಗಿದೆ ಎಂದು ಕಫೀಲ್ರ ಸಹೋದರ ಅದೀಲ್ ಅಹ್ಮದ್ ಖಾನ್ ಹೇಳಿದ್ದಾರೆ.
ಆದರೆ, ಈ ಪತ್ರದ ಸತ್ಯಾಸತ್ಯತೆಯನ್ನು ಪ್ರಶ್ನಿಸಿರುವ ಜೈಲಿನ ಹಿರಿಯ ಅಧೀಕ್ಷಕ ಶೈಲೇಂದ್ರ ಮೈತ್ರಿ, ಜೈಲಿನಿಂದ ಹೊರ ಹೋಗುವ ಎಲ್ಲ ಪತ್ರಗಳನ್ನು ಗಮನಿಸುತ್ತೇವೆ. ಕಫೀಲ್ ಅಂತಹ ಯಾವುದೇ ಪತ್ರ ಕಳುಹಿಸಿದ್ದನ್ನು ನಾವು ನೋಡಿಲ್ಲ. ಅಲ್ಲದೇ ಲಾಕ್‌ಡೌನ್ ಪ್ರಾರಂಭವಾದಾಗಿನಿಂದಲೂ ಕೈದಿಗಳನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡಲಾಗಿಲ್ಲ ಎಂದು ಹೇಳಿದ್ದಾರೆ.
2019 ರ ಡಿಸೆಂಬರ್ 13 ರಂದು ಅಲೀಘರ್ ಮುಸ್ಲಿಂ ವಿವಿಯಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಕಫೀಲ್ರನ್ನು ಬಂಧಿಸಲಾಗಿತ್ತು. ಷರತ್ತುಬದ್ಧ ಜಾಮೀನು ಮಂಜೂರಾಗಿದ್ದರೂ ಕೂಡ ಮಥುರಾ ಜೈಲಿನಿಂದ ಬಿಡುಗಡೆ ಮಾಡಿರಲಿಲ್ಲ.