ನವದೆಹಲಿ: ಭಾರತದಲ್ಲಿ ಗೂಗಲ್ ಪೇ ಬ್ಯಾನ್ ಮಾಡುವುದಿಲ್ಲ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್ಪಿಸಿಐ) ಸ್ಪಷ್ಟನೆ ನೀಡಿದ್ದು, ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದಿದೆ.
ಗ್ರಾಹಕರು ಗೂಗಲ್ ಪೇ ಮೂಲಕ ನಡೆಸುವ ವಹಿವಾಟು ಸುರಕ್ಷಿತವಲ್ಲ ಮತ್ತು ಈ ಆ್ಯಪ್ ಬಳಕೆಯಿಂದ ಸಮಸ್ಯೆಯಾಗಲಿದೆ ಎಂಬ ವದಂತಿ ಹರಡಿದ್ದ ಬೆನ್ನಲ್ಲೇ ಇದೀಗ ಎನ್ಪಿಸಿಐ ಸ್ಪಷ್ಟನೆ ನೀಡಿದೆ.
ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ವದಂತಿ ಹಬ್ಬಿತ್ತು. ಜತೆಗೆ ಇದರ ಬಗ್ಗೆ ಸ್ಪಷ್ಟನೆ ನೀಡುವಂತೆ ಆರ್ಬಿಐ ಭಾರತೀಯ ರಾಷ್ಟ್ರೀಯ ಪಾವತಿ ನಿಗಮಕ್ಕೆ ಸೂಚನೆ ನೀಡಿತು. ಹೀಗಾಗಿ ಸ್ಪಷ್ಟನೆ ನೀಡಲಾಗಿದ್ದು, ಇದರ ಮೂಲಕ ನಡೆಸುವ ವಹಿವಾಟು ಸಂಪೂರ್ಣವಾಗಿ ಸುರಕ್ಷಿತ ಮತ್ತು ಭದ್ರತೆಯಿಂದ ಕೂಡಿವೆ ಎಂದು ತಿಳಿಸಿದೆ.
ಆರ್ಬಿಐ ನೀಡಿರುವ ಎಲ್ಲ ಸೂಚನೆ ಗೂಗಲ್ ಪೇ ಮಾಡ್ತಿದ್ದು, ಗ್ರಾಹಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಈಗಾಗಲೇ ಗೂಗಲ್ ಪೇ ಕೂಡ ಮಾಹಿತಿ ನೀಡಿದೆ. ಯುಪಿಐ ನಂಬರ್ ಮೂಲಕ ಭಾರತದಲ್ಲಿ ಗೂಗಲ್ ಪೇ, ಪೋನ್ ಪೇ, ಪೇಟಿಎಂ ಮೂಲಕ ಜನರು ವಹಿವಾಟು ನಡೆಸುತ್ತಿದ್ದಾರೆ.