ಹೈದರಾಬಾದ್: ಒಳಗಿನ ಕಳ್ಳನನ್ನು ಹಿಡಿಯುವುದು ದೇವರಿಂದಲೂ ಸಾಧ್ಯವಿಲ್ಲ ಎಂಬ ಗಾದೆ ಮಾತು ಸುಮ್ಮನೇ ಹುಟ್ಟಿಲ್ಲ. ಕದಿಯುವ ಕಲೆಯಲ್ಲಿ ವ್ಯಕ್ತಿಯೊಬ್ಬ ಎಷ್ಟೇ ನುರಿತವನಾಗಿದ್ದರೂ, ತನ್ನ ಕಳ್ಳತನ ಸಾಬೀತುಪಡಿಸುವಂತಹ ಕೆಲವು ಪುರಾವೆಗಳನ್ನಾದರೂ ಆತ ಅಪರಾಧ ಎಸಗಿದ ಸ್ಥಳದಲ್ಲಿ ಬಿಟ್ಟಿರುತ್ತಾನೆ. ಪ್ರತಿಯೊಂದು ಪೊಲೀಸ್ ತನಿಖೆಯಲ್ಲಿಯೂ ಸಾಮಾನ್ಯವಾಗಿ ಕಂಡುಬರುವ ಅಂಶವಿದು. ಒಂದು ವೇಳೆ ಅದೇ ಕಳ್ಳತನ ಒಳಗಿನಿಂದ ನಡೆದರೆ, ಅಂದರೆ, ಜವಾಬ್ದಾರಿ ಸ್ಥಾನದಲ್ಲಿರುವವರೇ ಅಂತಹ ಅಕ್ರಮ ನಡೆಸಿದರೆ, ಇಲಾಖೆಯು ಅವಮಾನದ ಭಯದಿಂದಲೋ ಅಥವಾ ಅದು ತನಗೆ ಸಂಬಂಧಿಸಿಲ್ಲ ಎಂಬಂತೆ ಇಡೀ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತದೆ!.
ಕಳ್ಳರನ್ನು ಹಿಡಿಯುವುದನ್ನೇ ತಮ್ಮ ಕರ್ತವ್ಯವಾಗಿರುವ ಪೊಲೀಸ್ ಪಡೆ ಇಲಾಖೆಯೊಳಗಿನ ಕಳ್ಳರಿಗೆ ಇಡೀ ವ್ಯವಸ್ಥೆಯನ್ನೇ ಸ್ವರ್ಗವಾಗಿಸಿದೆ. ವಶಪಡಿಸಿಕೊಂಡಿರುವ ಕಳ್ಳ ಸ್ವತ್ತನ್ನು ಕದಿಯುವ ಹಾಗೂ ದಿನದಿಂದ ದಿನಕ್ಕೆ ಅಪಾಯಕಾರಿ ಹುಳುವಿನಂತೆ ಬೆಳೆಯುತ್ತಿರುವ ಇಲಾಖೆಯೊಳಗಿನ ಕಳ್ಳರಿಗೆ ಆಶ್ರಯ ತಾಣವಾಗುತ್ತಿದೆ. ದೇಶಕ್ಕೆ ಸಂಬಂಧಿಸಿದ ಅಪರಾಧ ಪ್ರಕರಣಗಳ ತನಿಖೆಯಲ್ಲಿ ದೊಡ್ಡ ಸ್ಥಾನದಲ್ಲಿರುವ ಕೇಂದ್ರೀಯ ತನಿಖಾ ತಂಡ (ಸಿಬಿಐ - ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ಕೂಡ ಈಗ ಅದೇ ದಾರಿ ಹಿಡಿದಿರುವುದು ಬೆಳಕಿಗೆ ಬಂದಿದೆ. ವಶಪಡಿಸಿಕೊಂಡಿದ್ದ ಆಸ್ತಿಯ ಪೈಕಿ 103 ಕೆಜಿ ಚಿನ್ನವನ್ನು ಕದ್ದ ಹಗರಣಕ್ಕೆ ಗುರಿಯಾಗಿದೆ. ಇದರಿಂದ ಕನಲಿದ ಮದ್ರಾಸ್ ಹೈಕೋರ್ಟ್, ವಶಪಡಿಸಿಕೊಂಡ ಚಿನ್ನ ಕಳವಾದ ಪ್ರಕರಣದ ವಿಚಾರಣೆಯನ್ನು ತಮಿಳುನಾಡಿನ ಸಿಐಡಿ ಪೊಲೀಸರಿಗೆ ಆದೇಶಿಸಿದಾಗ, ತನಗಿಂತ ಕೆಳಗಿನ ವ್ಯವಸ್ಥೆಯಿಂದ ತನಿಖೆಗೆ ಒಳಪಡುವುದು ತನ್ನ ಪ್ರತಿಷ್ಠೆಗೆ ಧಕ್ಕೆ ತರುವಂಥದು ಎಂದು ಪ್ರಲಾಪಿಸುತ್ತಿದೆ ಸಿಬಿಐ. ಈ ಪ್ರಹಸನದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಇದು ಎಂಟು ವರ್ಷಗಳ ಹಿಂದಿನ ಘಟನೆಗೆ ಸಂಬಂಧಿಸಿದ್ದು. ಆಗ ಸುರಾನಾ ಕಾರ್ಪೊರೇಶನ್ ಮೇಲೆ ನಡೆದ ದಾಳಿಯಲ್ಲಿ ಒಟ್ಟು 400.47 ಕೆಜಿ ಚಿನ್ನ ಮತ್ತು ಆಭರಣಗಳನ್ನು ಸಿಬಿಐ ವಶಪಡಿಸಿಕೊಂಡಿತ್ತು. ಸುರಾನಾ ಕಾರ್ಪೊರೇಶನ್ (ಎಂಎಂಟಿಸಿ – ಮೆಟಲ್ಸ್ ಅಂಡ್ ಮಿನರಲ್ಸ್ ಟ್ರೇಡಿಂಗ್ ಕಾರ್ಪೊರೇಶನ್) ಕೆಲಸವೇ ಚಿನ್ನವನ್ನು ಆಮದು ಮಾಡಿಕೊಳ್ಳುವುದು. ಈ ಪ್ರಕ್ರಿಯೆಯಲ್ಲಿ ಲಾಭ ಪಡೆದುಕೊಂಡು ಆ ಸಂಸ್ಥೆಗೆ ಲಾಭ ಮಾಡಿ ಕೊಡುವ ಉದ್ದೇಶದಿಂದ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಲೋಹಗಳು ಹಾಗೂ ಖನಿಜಗಳ ವ್ಯಾಪಾರ ನಿಗಮದ ಅಧಿಕಾರಿಗಳ ವಿರುದ್ಧದ ಪ್ರಕರಣದ ಭಾಗವಾಗಿ ಈ ದಾಳಿ ನಡೆಸಲಾಗಿತ್ತು. ಭ್ರಷ್ಟಾಚಾರದ ಆರೋಪದಲ್ಲಿ ಎಂಎಂಟಿಸಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ವಶಪಡಿಸಿಕೊಂಡ ಚಿನ್ನದ ಅಗತ್ಯವಿಲ್ಲ ಎಂದು ಹೇಳಿದ ಸಿಬಿಐ, ವಿದೇಶಿ ವ್ಯಾಪಾರ ನೀತಿ ಉಲ್ಲಂಘಿಸಿದ ಆರೋಪದ ಮೇಲೆ ಸುರಾನಾ ಕಾರ್ಪೊರೇಶನ್ ವಿರುದ್ಧ 2013 ರಲ್ಲಿ ದೂರು ದಾಖಲಿಸಿತು.
ನಂತರದಲ್ಲಿ ಚಿನ್ನವನ್ನು ವಿದೇಶಿ ವ್ಯಾಪಾರ ಮಹಾನಿರ್ದೇಶಕರಿಗೆ ವರ್ಗಾಯಿಸುವಂತೆ ವಿಶೇಷ ನ್ಯಾಯಾಲಯವನ್ನು ಸಿಬಿಐ ಕೇಳಿಕೊಂಡಿತು. ಯಾವುದೇ ಅಪರಾಧಗಳು ಇಲ್ಲದ ಕಾರಣ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದ್ದು, ಭ್ರಷ್ಟಾಚಾರ ಪ್ರಕರಣದ ವಿಚಾರಣೆಯಲ್ಲಿ ಚಿನ್ನದ ಮಾಲೀಕರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಹೇಳಿತು. ಆದರೆ, ಯಾವಾಗ ತಾನು ಎಸ್‌ಬಿಐ ಸೇರಿದಂತೆ ಬ್ಯಾಂಕುಗಳಿಂದ ಯಾವುದೇ ಸಾಲವನ್ನು ತೆಗೆದುಕೊಂಡಿಲ್ಲದ ಕಾರಣ ಸಿಬಿಐ ವಶಪಡಿಸಿಕೊಂಡಿರುವ ಚಿನ್ನವನ್ನು ತನಗೆ ಹಸ್ತಾಂತರಿಸುವಂತೆ ಸುರಾನಾ ಕಾರ್ಪೊರೇಶನ್ ಮನವಿ ಮಾಡಿತೋ ಆಗ ನಿಜವಾದ ಹುಳುಕು ಹೊರಬಂದಿತು. ಸುರಾನಾ ಕಾರ್ಪೊರೇಶನ್ ವಿರುದ್ಧ ದಿವಾಳಿತನದ ವಿಚಾರಣೆಯನ್ನು ಪ್ರಾರಂಭಿಸಿದ ವಿಶೇಷ ನ್ಯಾಯಾಲಯ, ವಶಪಡಿಸಿಕೊಂಡಿದ್ದ ಚಿನ್ನವನ್ನು ಬ್ಯಾಂಕ್‌ಗಳಿಗೆ ವರ್ಗಾಯಿಸಲು ಸಿಬಿಐಗೆ ಆದೇಶಿಸಿದಾಗ ಚಿನ್ನ ಕಳ್ಳತನವಾದ ವಿಷಯ ಬಯಲಿಗೆ ಬಂದಿದೆ.
ಕಳ್ಳನಿಗೊಂದು ಪಿಳ್ಳೆ ನೆವ
ವಶಪಡಿಸಿಕೊಂಡಿದ್ದ ಎಲ್ಲ ಚಿನ್ನವನ್ನು ಸ್ವತಂತ್ರ ಸಾಕ್ಷಿಗಳ ಸಮ್ಮುಖದಲ್ಲಿ ತೂಕ ಹಾಕಲಾಗಿದ್ದು, ಅದರ ಒಟ್ಟು ತೂಕ 400.47 ಕೆಜಿ ಎಂದು ನಿರ್ಧರಿಸಲಾಗಿತ್ತು ಎಂದು ಸಿಬಿಐ ವಾದಿಸಿತು. ಹೀಗೆ ತೂಕ ಹಾಕಿದ್ದ ಚಿನ್ನವನ್ನು ಸುರಾನಾ ಕಾರ್ಪೊರೇಶನ್‌ನ ಖಜಾನೆಯಲ್ಲಿ ಸುರಕ್ಷಿತವಾಗಿ ಇರಿಸಲಾಗಿತ್ತು. ಒಟ್ಟು 72 ಬೀಗಗಳೊಂದಿಗೆ ಸದರಿ ಚಿನ್ನದ ಖಜಾನೆ ಭದ್ರಪಡಿಸಿ, ಆ ಕೀಲಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಎಸ್‌ಬಿಐಗೆ ಚಿನ್ನವನ್ನು ಹಸ್ತಾಂತರಿಸುವ ಸಮಯದಲ್ಲಿ, ಚಿನ್ನದ ತೂಕ ಅಕ್ಷರಶಃ 103 ಕೆಜಿ ಕಡಿಮೆಯಾಗಿದ್ದು ಮತ್ತು ಕಾಣೆಯಾಗಿರುವುದು ಬೆಳಕಿಗೆ ಬಂದಿತು. ಯಾವುದೇ ಹಿಂಜರಿಕೆಯಿಲ್ಲದೆ ಸಿಬಿಐ ಹೇಳುತ್ತಿರುವ ಈ ವಿವರಣೆ ಕೇಳಿದರೆ ಪರಿಣಿತ ಲೆಕ್ಕಿಗರೇ ಆಘಾತಕ್ಕೆ ಒಳಗಾಗುವರು! ಆದರೆ, ಸಿಬಿಐ ಮಾತ್ರ ತನ್ನ ವಾದವನ್ನು ಹಾಗೇ ಮುಂದಿಡುತ್ತಿದೆ. ಚಿನ್ನವನ್ನು ಠೇವಣಿ ಮಾಡಿದಾಗ ಅದನ್ನು ಒಟ್ಟಾರೆಯಾಗಿ ತೂಕ ಮಾಡಲಾಯಿತು. ಎಸ್‌ಬಿಐಗೆ ಹಸ್ತಾಂತರಿಸುವ ಸಮಯದಲ್ಲಷ್ಟೇ ಚಿನ್ನದ ಸರಳುಗಳನ್ನು ಪ್ರತ್ಯೇಕವಾಗಿ ತೂಕಕ್ಕೆ ಹಾಕಲಾಯಿತು. ಹೀಗಾಗಿ ಈ ಕೊರತೆ ಕಾಣಿಸಿಕೊಂಡಿದೆ ಎನ್ನುತ್ತದೆ ಅದು. ಸಿಬಿಐನ ಈ ಕಥೆಗಳ ಎದುರು ಉಳಿದೆಲ್ಲ ಕಾದಂಬರಿಗಳು ಮಸುಕಾಗಿ ಹೋಗುತ್ತವೆ!
ವಾಸ್ತವ ಪರೀಕ್ಷೆ
ಕೊರತೆಯಾಗಿರುವ ಚಿನ್ನವನ್ನು ಹಸ್ತಾಂತರಿಸುವಂತೆ ಸಿಬಿಐಗೆ ಸೂಚನೆ ನೀಡುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೊಕದ್ದಮೆ ವಿಚಾರಣೆಯ ವೇಳೆ ಇಲಾಖೆ ಮಂಡಿಸಿದ ವಾದಗಳು ತಮಾಷೆಯಾಗಿದ್ದವು. ತನಿಖೆಯನ್ನು ಸ್ಥಳೀಯ ಪೊಲೀಸರು ನಡೆಸಬಾರದು. ನಡೆಸುವುದಾದರೆ ನೆರೆಯ ರಾಜ್ಯಗಳ ಪೊಲೀಸರು ಅಥವಾ ಸಿಬಿಐ ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ – ನ್ಯಾಶನಲ್ ಇನ್ವೆಸ್ಟಿಗೇಶನ್ ಏಜೆನ್ಸಿ) ನಡೆಸಬೇಕು ಎಂದು ಹೇಳಿತು. ಸ್ಥಳೀಯ ಪೊಲೀಸರು ವಿಚಾರಣೆ ನಡೆಸಿದರೆ ತನ್ನ ಪ್ರತಿಷ್ಠೆಗೆ ಅಪಾಯವಾಗುತ್ತದೆ ಎಂದು ಅದು ವಾದಿಸಿತು. ಆದರೆ, ವಿಶೇಷ ನ್ಯಾಯಾಲಯ ಸಿಬಿಐನ ಈ ವಾದವನ್ನು ಮುಲಾಜಿಲ್ಲದೇ ತಳ್ಳಿಹಾಕಿತು. ಸಿಬಿಐಗೆ ಯಾವುದೇ ವಿಶೇಷ ಸವಲತ್ತುಗಳಿಲ್ಲ ಹಾಗೂ ಅದು ಎಲ್ಲಾ ಪೊಲೀಸರನ್ನೂ ನಂಬಬೇಕು ಎಂಬ ನ್ಯಾಯಾಲಯದ ಹೇಳಿಕೆಗಳು ಗಮನಿಸಬೇಕಾದ ಅಂಶಗಳಾಗಿವೆ. ಚಿನ್ನ ಕಾಣೆಯಾದ ಪ್ರಕರಣದ ಪೊಲೀಸ್ ತನಿಖೆ ಆರು ತಿಂಗಳೊಳಗೆ ಪೂರ್ಣಗೊಳ್ಳಬೇಕು ಹಾಗೂ ಸಿಬಿಐ ಪರಿಶುದ್ಧವಾಗಿ ಹೊರಹೊಮ್ಮಿದರೆ ಅದರ ಪ್ರತಿಷ್ಠೆ ದ್ವಿಗುಣವಾಗುವುದು. ಇಲ್ಲದೇ ಹೋದರೆ, ಅದು ಶಿಕ್ಷೆಗೆ ಸಿದ್ಧವಾಗಬೇಕು ಎಂದು ಅದು ತೀರ್ಪು ನೀಡಿತು.
ಸಮಾಜದಲ್ಲಿ ತನ್ನ ಘನತೆ, ಖ್ಯಾತಿ ಮತ್ತು ನೈಜತೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿಗಳನ್ನು ಸಿಬಿಐ ತ್ಯಜಿಸಿದೆ ಎಂದು ಕಾಣುತ್ತದೆ. ತನ್ನ ನಿಯಂತ್ರಣದಲ್ಲಿದ್ದ 43 ಕೋಟಿ ರೂ. ಮೌಲ್ಯದ ಚಿನ್ನವನ್ನು ಕಳೆದುಕೊಂಡಾಗ ಅದು ತನ್ನ ಖ್ಯಾತಿಗೆ ಕಳಂಕ ಪಟ್ಟಿಯಾಗಿದೆ ಎಂಬುದು ಸಿಬಿಐಗೆ ಏಕೆ ಅರಿವಾಗುತ್ತಿಲ್ಲ? ಪರಿಸ್ಥಿತಿ ಹೀಗಿದ್ದರೆ, ಸಿಬಿಐ ಹಾಗೂ ಅದರಂತಹ ಕಣ್ಗಾವಲು ಏಜೆನ್ಸಿಗಳು ಅಕ್ರಮ ವಹಿವಾಟು, ಕಳ್ಳಸಾಗಣೆ ಮತ್ತು ತಮ್ಮ ದಾಳಿಗಳ ಸಮಯದಲ್ಲಿ ವಶಪಡಿಸಿಕೊಂಡಿರುವ ಇತರ ಚಿನ್ನ, ಮಾದಕ ವಸ್ತುಗಳಂತಹ ಇತರ ವಸ್ತುಗಳ ಗತಿ ಅಂತಿಮವಾಗಿ ಏನಾಗುತ್ತದೆ ಎಂಬ ಪ್ರಶ್ನೆ ಸಾಮಾನ್ಯ ನಾಗರಿಕನನ್ನು ಕಾಡತೊಡಗಿವೆ. ಸರ್ಕಾರದ ಮೂಲಗಳ ಪ್ರಕಾರ, 2005 ಮತ್ತು 15ರ ನಡುವೆ ದೇಶಾದ್ಯಂತ 60 ಲಕ್ಷ ಕೆಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆ ಪೈಕಿ 16 ಲಕ್ಷ ಕೆಜಿ ದ್ರವ್ಯವವನ್ನು ನಾಶಪಡಿಸಲಾಗಿದೆ. ದಾಖಲೆಗಳಿಂದ ಬಹಿರಂಗಪಡಿಸಿದಂತೆ, ಬಾಕಿ ಮಾದಕ ದ್ರವ್ಯ ಏನಾಯಿತು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಸರ್ಕಾರಿ ಮೂಲಗಳು ಸುಪ್ರೀಂ ಕೋರ್ಟ್‌ಗೆ ತಿಳಿಸಿವೆ.
ಎಂಟು ವರ್ಷಗಳ ಹಿಂದೆ ಚೆನ್ನೈನ ಫ್ಲವರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಸಂಗ್ರಹವಾಗಿದ್ದ 144 ಕೆಜಿ ಮಾದಕ ವಸ್ತುಗಳು ಕಣ್ಮರೆಯಾಗಲು ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿಶೇಷ ನ್ಯಾಯಾಲಯ ಆದೇಶಿಸಿದೆ. 2015ರಲ್ಲಿ, ಬ್ಯೂರೋ ಆಫ್ ನಾರ್ಕೋಟಿಕ್ಸ್ ಕಂಟ್ರೋಲ್‌ನ ಕಚೇರಿಗಳಿಂದಲೇ ನೂರಾರು ಕಿಲೋಗ್ರಾಮ್‌ಗಳಷ್ಟು ಸರಕುಗಳು ಕಳೆದುಹೋಗಿವೆ. ವಶಪಡಿಸಿಕೊಂಡ ವಸ್ತುಗಳನ್ನು ಕಣ್ಮರೆಯಾಗಿಸುವ ಕಲೆಯಲ್ಲಿ ಇಲಾಖೆಗಳ ಒಳಗಿನವರ ಕೌಶಲ್ಯವನ್ನು ಸಾಬೀತುಪಡಿಸಲು ಇದಕ್ಕಿಂತ ಹೆಚ್ಚಿನ ಪುರಾವೆಗಳು ಬೇಕೆ? ಇನ್ನು, ವಿದೇಶದಿಂದ ಪ್ರಯಾಣಿಕರು ಕಳ್ಳಸಾಗಣೆ ಮಾಡುವ ಚಿನ್ನವನ್ನು ವಶಪಡಿಸಿಕೊಂಡು ಅದನ್ನು ಸಂಗ್ರಹಿಸಿಡಲು ಸೀಮಾ ಸುಂಕ (ಕಸ್ಟಮ್ಸ್) ಇಲಾಖೆಯು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತ ತಿಜೋರಿಯನ್ನು ಹೊಂದಿದೆ. ಅಲ್ಲಿಂದಲೂ ನೂರಾರು ಕೆಜಿ ಚಿನ್ನ ಕಳ್ಳತನವಾಗಿರುವ ಕುರಿತು ಇದೇ ಸಿಬಿಐ ತನಿಖೆ ನಡೆಸುತ್ತಿದೆ! ಈ ಕುರಿತ ವಿವರಗಳನ್ನು ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದಕ್ಕೆ ಸೀಮಾ ಸುಂಕ ಇಲಾಖೆ ವಿಚಿತ್ರವಾಗಿ ಉತ್ತರ ನೀಡಿದೆ. ತಿಜೋರಿಯಲ್ಲಿ ಎಷ್ಟು ಚಿನ್ನವನ್ನು ಸಂಗ್ರಹಿಸಲಾಗಿದೆ ಎಂಬುದನ್ನು ತಾನು ಬಹಿರಂಗಪಡಿಸಿದರೆ, ಶೇಖರಿಸಿಟ್ಟಿರುವ ಚಿನ್ನ ಅಸುರಕ್ಷಿತವಾಗುತ್ತದೆ ಎಂದು ಅದು ಹೇಳಿದೆ! ಅಪರಾಧ ಹೇಗೆ ನಡೆಯಿತು ಎಂಬುದನ್ನೇನಾದರೂ ಉಲ್ಲೇಖಿಸಿದರೆ, ಆ ಕುರಿತ ತನಿಖೆ ಅಪಾಯಕ್ಕೆ ಸಿಲುಕಿದಂತೆ ಎನ್ನುತ್ತದೆ ಉತ್ತರ.
ಗುಜರಾತ್‌ನ ಜಾಮನಗರ ಸೀಮಾ ಸುಂಕ ಇಲಾಖೆ ಇತ್ತೀಚೆಗೆ 10 ಲಕ್ಷ ಕೋಟಿ ರೂ. ಮೌಲ್ಯದ ಚಿನ್ನವನ್ನು ತನ್ನ ನಿಯಂತ್ರಣದಿಂದ ಕಳೆದುಕೊಂಡಿತು. ಗುಪ್ತಚರ ಸಂಸ್ಥೆಗಳ ನಿರ್ವಹಣೆ ಎಷ್ಟು ಭ್ರಷ್ಟವಾಗಿದೆ ಮತ್ತು ಅವುಗಳ ವರ್ತನೆ ಎಷ್ಟು ಕಠೋರವಾಗಿದೆ ಎಂದರೆ, ಮುಟ್ಟುಗೋಲು ಹಾಕಿದ ವಸ್ತುಗಳು ಯಾರ ಬಳಿಗೆ ಹೋಗುತ್ತವೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ! ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ 36 ಸಿಬಿಐ ಅಧಿಕಾರಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಸಿಬಿಐ ಮಾಡಿರುವ ಶೋಚನೀಯ ಹಾಗೂ ನಾಚಿಕೆಗೇಡಿನ ಕೆಲಸಗಳನ್ನು ನೋಡಿದರೆ, ರಾಜಕೀಯ ಕೋನಗಳನ್ನು ಹೊಂದಿರದ ಪ್ರಕರಣಗಳಲ್ಲಿ ಅದು ತೋರುವ ಉತ್ತಮ ಕಾರ್ಯಕ್ಷಮತೆಯನ್ನು ಕೂಡಾ ಸಮರ್ಥಿಸಲಾಗದಂತಿದೆ. ಗುಪ್ತಚರ ಸಂಸ್ಥೆಗಳ ಇಂತಹ ಸಮಸ್ಯಾತ್ಮಕ ಕಾರ್ಯಶೈಲಿಯಿಂದಾಗಿ ಇಡೀ ದೇಶದ ಪ್ರತಿಷ್ಠೆ ಅಪಾಯಕ್ಕೆ ಸಿಲುಕಿದೆ.