ಚೆನ್ನೈ: ದುಬೈನಿಂದ ಚೆನ್ನೈ ಏರ್ಪೋರ್ಟ್‌ಗೆ ಬಂದಿಳಿದ ಪ್ರಯಾಣಿಕನೊಬ್ಬನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 286 ಗ್ರಾಂ ಚಿನ್ನವನ್ನು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇಂಡಿಗೊ ಏರ್ಲೈನ್ಸ್ ವಿಮಾನ ಇಂದು ಬೆಳಿಗ್ಗೆ ದುಬೈನಿಂದ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಈ ವೇಳೆ ಪ್ರಯಾಣಿಕರನ್ನು ಪರೀಕ್ಷಿಸುವಾಗ ಅಧಿಕಾರಿಗಳು ಸೈಯದ್ ನದೀಮ್ ರಹಮಾನ್ (33) ಎಂಬಾತನನ್ನು ಅನುಮಾನದ ಮೇರೆಗೆ ಪರೀಕ್ಷೆಗೊಳಪಡಿಸಿದ್ದಾರೆ. ಈ ವೇಳೆ ಆತನ ಬ್ಯಾಗ್ನಲ್ಲಿದ್ದ ಆಟದ ಕಾರ್ ನಲ್ಲಿ, ಫೇಸ್ ಕ್ರೀಮ್ ಬಾಕ್ಸ್ ಮತ್ತು ಉಗುರು ತೆಗೆಯುವ ಕಟ್ಟರ್‌ಗಳು ಕಂಡುಬಂದಿವೆ. ಅವುಗಳನ್ನು ಪರೀಕ್ಷಿಸಿದಾಗ ಫೇಸ್ ಕ್ರೀಮ್ ಬಾಕ್ಸ್ನಲ್ಲಿ ಚಿನ್ನದ ಪೇಸ್ಟ್ ಮತ್ತು ಉಗುರು ಕಟ್ಟರ್ ಮತ್ತು ರಿಮೋಟ್ ಕಾರ್ನಲ್ಲಿ ಸಣ್ಣ ಚಿನ್ನದ ತುಂಡುಗಳನ್ನು ದೊರೆತಿವೆ.
ಕಸ್ಟಮ್ಸ್ ಅಧಿಕಾರಿಗಳು ರಹಮಾನ್ನಿಂದ ಒಟ್ಟು 14.12 ಲಕ್ಷ ರೂಪಾಯಿ ಮೌಲ್ಯದ 286 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಬಂಧಿಸಿದ್ದು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.