ಪಣಜಿ (ಗೋವಾ): ಕರ್ನಾಟಕ ರಾಜ್ಯದ ಗೋ ಹತ್ಯೆ ನಿಷೇಧ ಮಸೂದೆ 2020' ಅನ್ನು ತಮ್ಮ ಪ್ರಭಾವ ಬಳಸಿಕೊಂಡು ಕಾಯ್ದೆಯಾಗಿ ಜಾರಿಗೆ ಬರುವುದನ್ನು ತಡೆಹಿಡಿಯುವಂತೆ ಗೋವಾದ ಜಾನುವಾರು ವ್ಯಾಪಾರಿಗಳು ಗೋವಾ ಸಿಎಂ ಪ್ರಮೋದ್ ಸಾವಂತ್ ಅವರನ್ನು ಒತ್ತಾಯಿಸಿದ್ದಾರೆ.
ವ್ಯಾಪಾರಿಗಳ ಮನವಿ
ಈ ಬಗ್ಗೆ ಗೋವಾದ ಖುರೇಷಿ ಮಾಂಸ ವ್ಯಾಪಾರಿಗಳ ಸಂಘ ಗೋವಾ ಸಿಎಂಗೆ ಪತ್ರ ಬರೆದಿದೆ. ಬಹುಸಂಸ್ಕೃತಿಯುಳ್ಳ ಕರಾವಳಿ ರಾಜ್ಯ ಗೋವಾದಲ್ಲಿ ಗೋಮಾಂಸ ಜನರ ಪ್ರಧಾನ ಆಹಾರದ ಒಂದು ಭಾಗವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಕೂಡ ಅದನ್ನು ಸೇವಿಸುತ್ತಾರೆ. ಕರ್ನಾಟಕದಲ್ಲಿ ಈ ಕಾನೂನು ಜಾರಿಗೆ ಬಂದರೆ ಅದು ನಮ್ಮ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.
ವಿಧೇಯಕ ಕುರಿತ ಅಧಿಸೂಚನೆ ಹೊರಬಿದ್ದರೆ, ಕರ್ನಾಟಕ ರಾಜ್ಯದ ರೈತರ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕರ್ನಾಟಕದ ರೈತರು ತಮ್ಮ ವಯಸ್ಸಾದ ಮತ್ತು ಕೃಷಿ ಕಾರ್ಯಕ್ಕೆ ಅನುಪಯುಕ್ತವಾದ ದನಗಳನ್ನು ಮಾರಾಟ ಮಾಡಲು ತೊಂದರೆಯಾಗಲಿದೆ ಎಂದು ಸಂಘವು ಪತ್ರದಲ್ಲಿ ಉಲ್ಲೇಖಿಸಿದೆ. ಹೀಗಾಗಿ ಕರ್ನಾಟಕ ಹಾಗೂ ಗೋವಾ ಎರಡೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ಈ ಗೋ ಅಕ್ರಮ ಮಾರಾಟ ಮತ್ತು ಗೋ ಹತ್ಯೆ ನಿಷೇಧ ಸಮೂದೆ ಅಂಗೀಕಾರವಾಗದಂತೆ ತಡೆಯುವಂತೆ ಕೋರಿದ್ದಾರೆ.
ಕಳೆದ ವಾರ ಕರ್ನಾಟಕ ವಿಧಾನಸಭೆಯಲ್ಲಿ ಗೋ ಅಕ್ರಮ ಮಾರಾಟ ಮತ್ತು ಗೋ ಹತ್ಯೆ ನಿಷೇಧ ಮಸೂದೆ (2020) ಅನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ವಿರೋಧದ ನಡುವೆಯೂ ಅಂಗೀಕರಿಸಲಾಯಿತು. ಆದರೆ ವಿಧಾನಪರಿಷತ್ನಲ್ಲಿ ಇನ್ನೂ ಈ ವಿಧೇಯಕ ಅಂಗೀಕಾರವಾಗಿಲ್ಲ.