ನವದೆಹಲಿ: ಆರ್ಥಿಕ ಮತ್ತು ಶಾಂತಿಗಾಗಿ ಇರುವ ಆಸ್ಟ್ರೇಲಿಯಾದ ಸಂಸ್ಥೆಯ ಪರಿಣಿತರು ಸಿದ್ಧಪಡಿಸಿದ ಜಾಗತಿಕ ಶಾಂತಿ ಸೂಚ್ಯಂಕ ಶ್ರೇಣಿಯಲ್ಲಿ ಭಾರತ ಕಳೆದ ವರ್ಷಕ್ಕಿಂತ ಐದು ಸ್ಥಾನ ಕುಸಿದಿದೆ.
ಈ ಪಟ್ಟಿಯಲ್ಲಿ ಒಟ್ಟು 163 ರಾಷ್ಟ್ರಗಳಿದ್ದು, ಇದರಲ್ಲಿ ಭಾರತ 141ನೇ ಸ್ಥಾನ ಪಡೆದಿದೆ. ವಿಶ್ವದ ಶಾಂತಿಯುತ ರಾಷ್ಟ್ರವೆಂಬ ಅಗ್ರ ಪಟ್ಟವನ್ನು ಐಸ್ಲ್ಯಾಂಡ್ ಸತತ 11 ವರ್ಷಗಳಿಂದ ತನ್ನ ಬಳಿ ಉಳಿಸಿಕೊಂಡಿದೆ. ಉಳಿದಂತೆ ನ್ಯೂಜಿಲ್ಯಾಂಡ್, ಆಸ್ಟ್ರಿಯಾ, ಪೋರ್ಚುಗಲ್ ಹಾಗೂ ಡೆನ್ಮಾರ್ಕ್ ನಂತರದ ಸ್ಥಾನದಲ್ಲಿವೆ.
ಈ ಹಿಂದೆ ಕೊನೆಯ ಸ್ಥಾನ ಪಡೆದಿದ್ದ ಸಿರಿಯಾ ಜಾಗ ಅಫ್ಘಾನಿಸ್ತಾನದ ಪಾಲಾಗಿದೆ. ನೆರೆಯ ರಾಷ್ಟ್ರ ಪಾಕಿಸ್ತಾನ 153ನೇ ಸ್ಥಾನದಲ್ಲಿದೆ. ಕಳೆದ ದಶಕದಿಂದ ಜಾಗತಿಕ ಶಾಂತಿ ಶೇ 3.8ರಷ್ಟು ಹದಗೆಟ್ಟಿದೆ. ಶಾಂತಿ ಪರಿಸ್ಥಿತಿ ಮೇಲೆ ಹವಾಮಾನ ಬದಲಾವಣೆಯ ಪರಿಣಾಮದ ಅಂಶಗಳನ್ನು ಪಟ್ಟಿಯಲ್ಲಿ ಪರಿಗಣಿಸಲಾಗಿದೆ ಎಂದು ವರದಿ ತಿಳಿಸಿದೆ.
ಅತಿ ಹೆಚ್ಚಿನ ಅಪಾಯಕಾರಿ ವಾತಾವರಣ ಎದುರಿಸುತ್ತಿರುವವರ ಸಾಲಿನಲ್ಲಿ ಭಾರತ, ಜಪಾನ್, ಬಾಂಗ್ಲಾ, ಮ್ಯಾನ್ಮಾರ್, ಇಂಡೋನೇಷ್ಯಾ, ವಿಯೆಟ್ನಾಂ ಹಾಗೂ ಫಿಲಿಪ್ಪಿನ್ಸ್ ಇವೆ. ಭಾರತ, ಚೀನಾ ಹಾಗೂ ಬಾಂಗ್ಲಾದ 39.3 ಕೋಟಿ ಜನ ಅಪಾಯಕಾರಿ ವಾತಾವರಣದಲ್ಲಿ ಜೀವಿಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.