ತ್ರಿಶೂರ್(ಕೇರಳ): ಎಲ್ಲವೂ ಸರಿಯಾಗಿದ್ದು, ಜೀವನ ನಡೆಸುವ ವ್ಯಕ್ತಿಯೊಂದಿಗೆ ಮದುವೆಯಾಗಲು ಇಂದಿನ ಯುವತಿಯರು ಹಿಂದೆ ಮುಂದೆ ನೋಡ್ತಾರೆ. ಅಂತಹುದ್ದರಲ್ಲಿ ಇಲ್ಲೊಬ್ಬ ಯುವತಿ ಪಾರ್ಶ್ವವಾಯು ಪೀಡಿತ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ನಡೆದಿದೆ.
ಕೇರಳದ ತ್ರಿಶೂರ್ದಲ್ಲಿ ಈ ಘಟನೆ ನಡೆದಿದೆ. ಕಳೆದ ಆರು ವರ್ಷಗಳ ಹಿಂದೆ ತೇಜ್ಕಾಡ್ದಲ್ಲಿ ನಡೆದಿದ್ದ ಬೈಕ್ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಸೊಂಟದ ಕೆಳಗಿನ ಭಾಗದ ಶಕ್ತಿ ಕಳೆದುಕೊಂಡು ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಅಂದಿನಿಂದ ಗಾಲಿ ಕುರ್ಚಿ ಮೇಲೆ ಕುಳಿತುಕೊಂಡು ಜೀವನ ಸಾಗಿಸುತ್ತಿದ್ದರು. ಮೂಲಭೂತ ಅವಶ್ಯಕತೆಗಾಗಿ ಇನ್ನೊಬ್ಬರನ್ನ ಅವಲಂಬಿಸಬೇಕಾಗಿತ್ತು. ಇಷ್ಟಾದರೂ ಹೊರಗಡೆ ಪ್ರಪಂಚದಿಂದ ವಂಚಿತರಾಗದೇ ಹಬ್ಬ- ಜಾತ್ರೆಗಳಲ್ಲಿ ಭಾಗಿಯಾಗುತ್ತಿದ್ದರು. ಅದೇ ವಿಡಿಯೋವೊಂದನ್ನ ತಮ್ಮ ಫೇಸ್ಬುಕ್ನಲ್ಲಿ ಹಾಕಿಕೊಂಡಿದ್ದರು. ಅದನ್ನ ನೋಡಿರುವ ತಿರುವನಂತಪುರಂನ ಶಾಹ್ನಾ ಎಂಬ ಯುವತಿ ಆತನ ಮೊಬೈಲ್ ನಂಬರ್ ಪಡೆದುಕೊಂಡು ಫೋನ್ ಮಾಡಿದ್ದಾಳೆ. ಕೆಲ ದಿನಗಳ ಕಾಲ ಆತನೊಂದಿಗೆ ಮಾತನಾಡಿರುವ ಯುವತಿ ತದನಂತರ ಮದುವೆಯಾಗಬೇಕೆಂಬ ಆಸೆ ಹೊರಹಾಕಿದ್ದಾಳೆ.
ಆದರೆ, ತನ್ನ ಪರಿಸ್ಥಿತಿ ಬಗ್ಗೆ ಪ್ರಣವ್ ಮಾಹಿತಿ ನೀಡಿದ್ದಾನೆ. ಇಷ್ಟಾದರೂ ಆತನನ್ನು ಮೆಚ್ಚಿಕೊಂಡಿರುವ ಯುವತಿ ಮದುವೆಯಾಗುವ ಹಠ ಹಿಡಿದಿದ್ದಾಳೆ. ಇದಾದ ಬಳಿಕ ಇದೇ ವಿಷಯವನ್ನ ತನ್ನ ಕುಟುಂಬಸ್ಥರ ಮುಂದೆ ಹೇಳಿದ್ದು, ಅವರು ಬೆಚ್ಚಿಬಿದ್ದಿದ್ದಾರೆ. ಇಷ್ಟಾದರೂ ಹುಡುಗನ ಭೇಟಿಯಾಗಿರುವ ಶಾಹ್ನಾ ಕೊಡುಂಗಲ್ಲೂರಿನ ದೇವಸ್ಥಾನವೊಂದರಲ್ಲಿ ನಡೆದ ಸಮಾರಂಭದಲ್ಲಿ ಮದುವೆಯಾಗಿದ್ದಾರೆ.