ತಮಿಳುನಾಡು/ಕೊಯಮತ್ತೂರು: ತಮಿಳುನಾಡಿನಲ್ಲಿ ಕೊರೊನಾ ಅಟ್ಟಹಾಸ ಮಿತಿ ಮೀರಿದೆ. ಈ ಹಿನ್ನೆಲೆ ಸರ್ಕಾರ ಹಲವು ಕ್ರಮಗಳಿಗೆ ಮುಂದಾಗಿದೆ.
ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಸಲುವಾಗಿ, ತಮಿಳುನಾಡು ಸರ್ಕಾರವು 11 ಸದಸ್ಯರನ್ನೊಳಗೊಂಡ ವೈದ್ಯಕೀಯ ತಜ್ಞರ ತಂಡವನ್ನು ರಚಿಸಿದೆ. ಇದು ಕೊರೊನಾ ರೋಗ ಹರಡುವುದನ್ನು ತಡೆಯುವ ಕ್ರಮಗಳನ್ನು ಸರ್ಕಾರಕ್ಕೆ ಸೂಚಿಸುತ್ತದೆ.
ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನರಲ್ಲಿ ಈ ವೈರಸ್ ಹರಡುವಿಕೆ ಹೆಚ್ಚಾಗಿದೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗ ಪಡಿಸಿದೆ. ಹೀಗಾಗಿ ತಮಿಳುನಾಡು ಸರ್ಕಾರ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನರನ್ನು ಗುರ್ತಿಸಿ ಅವರಿಗೆ ಆಯುರ್ವೇದಿಕ ಔಷಧ ಬಳಸುವಂತೆ ಕೊರೊನಾ ನಿಯಂತ್ರಿಸಲು ರಚನೆ ಯಾಗಿರುವ ತಂಡ ಸರ್ಕಾರಕ್ಕೆ ಸೂಚಿಸಿದೆ. ಹೆಚ್ಚು ರೋಗನಿರೋಧಕ ವರ್ಧಕ ಎಂದೇ ಹೇಳಲಾಗುವ ಕಬಾಸುರಾ ಕುಡಿನೀರ್- (ಗಿಡಮೂಲಿಕೆಗಳ ಮಿಶ್ರಣವನ್ನು ತಯಾರಿಸಲು ಬಳಸುವ ಪುಡಿ) ವಿತರಿಸಲು ಈ ತಂಡವು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.
ಇನ್ನು ರೋಗನಿರೋಧಕ ಪುಡಿ ಅಧಿಕೃತ ಅನುಮೋದನೆ ಪಡೆದ ಕೂಡಲೇ, ವಿವಿಧ ಸಂಸ್ಥೆಗಳು ರೋಗನಿರೋಧಕ ವರ್ಧಕವನ್ನು ತಯಾರಿಸಲು ಪ್ರಾರಂಭಿಸಿವೆ. ಇದನ್ನು ತಿಳಿದ ನೂಲು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವ ಕೊಯಮತ್ತೂರು ಬಳಿಯ ಅನ್ನೂರು ನಿವಾಸಿ 22 ವರ್ಷದ ಕವಿಪ್ರಿಯ ಎಂಬ ಯುವತಿ ತನ್ನ ಗ್ರಾಮದಲ್ಲಿ ಇರುವ ರೋಗ ನಿರೋಧಕ ಶಕ್ತಿ ಕಡಿಮೆಯಿರುವ ಜನರಿಗೂ ಈ ಪುಡಿಯನ್ನು ನೀಡಲು ನಿರ್ಧರಿಸಿ, ಅದನ್ನು ತಯಾರಿಸಲು ತನ್ನ ಕಾಲ್ಗೆಜ್ಜೆಯನ್ನು ಮಾರಿ ಅದರಿಂದ ಬಂದ ಹಣವನ್ನು ಕಬಾಸುರ ಕುಡಿನೀರ್ ತಯಾರಿಕೆಯಲ್ಲಿ ತೊಡಗಿರುವ ಸಂಸ್ಥೆಗೆ ದೇಣಿಗೆಯಾಗಿ ನೀಡಿದ್ದಾಳೆ. ಈಕೆಯಿಂದ ಪ್ರೇರಣೆಗೊಂಡ ಗ್ರಾಮದ ಇತರ ಜನರೆಲ್ಲ ಸೇರಿ ಒಟ್ಟು 20 ಸಾವಿರ ರೂಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಕವಿಪ್ರಿಯ "ನಮ್ಮ ಊರಿನ ಜನರ ಬಳಿ ಈ ರೋಗ ನಿರೋಧಕ ಪುಡಿ ಖರೀದಿಸಲು ಹಣವಿಲ್ಲ, ಹೀಗಾಗಿ ನನ್ನ ಗ್ರಾಮಸ್ಥರಿಗೆ ಸೇವೆ ಸಲ್ಲಿಸಲು ನನ್ನ ಕಾಲ್ಗೆಜ್ಜೆ ಮಾರಾಟ ಮಾಡಲು ನಿರ್ಧರಿಸಿದ್ದೇನೆ" ಎಂದು ತಿಳಿಸಿದ್ದಾರೆ. ಯುವತಿಯ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.