ನೋಯ್ಡಾ(ಉತ್ತರಪ್ರದೇಶ): ಉತ್ತರಪ್ರದೇಶದ ನೋಯ್ಡಾದ ಶಾಲೆವೊಂದರಲ್ಲಿ 14 ವರ್ಷದ ಬಾಲಕಿ ಮೃತದೇಹ ಪತ್ತೆಯಾಗಿದ್ದು, ಅತ್ಯಾಚಾರವೆಸಗಿ, ಕೊಲೆಗೈದಿರುವುದಾಗಿ ಆಕೆಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಜುಲೈ 3ರಂದು ಈ ಘಟನೆ ನಡೆದಿದ್ದು, ಇಲ್ಲಿಯವರೆಗೆ ಯಾವುದೇ ರೀತಿಯ ದೂರು ದಾಖಲಾಗಿಲ್ಲ. ಆದರೆ ಇದೇ ವಿಷಯವಾಗಿ ಮಾತನಾಡಿರುವ ಪೊಲೀಸ್ ಅಧಿಕಾರಿ ಪೋಷಕರು ದಾಖಲೆ ಸಹಿತವಾಗಿ ಬಂದರೆ ನಾವು ತನಿಖೆ ನಡೆಸಲು ಸಿದ್ಧರಿದ್ದೇವೆ ಎಂದಿದ್ದಾರೆ. ಬಾಲಕಿ ಕುಟುಂಬಸ್ಥರ ಆರ್ಥಿಕ ಸ್ಥಿತಿ-ಗತಿ ಸರಿಯಾಗಿರಲಿಲ್ಲ. ಹೀಗಾಗಿ ಮನನೊಂದು ಆಕೆ ಸಾವನ್ನಪ್ಪಿದ್ದಾಳೆ ಎಂಬ ಮಾತು ಸಹ ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಹೆಚ್ಚು ವ್ಯಾಪಕತೆ ಪಡೆದುಕೊಂಡಿದೆ.
ಕುಟುಂಬಸ್ಥರು ಮೂಲತಃ ಹರಿಯಾಣದವರಾಗಿದ್ದು, ಮುಖ್ಯಮಂತ್ರಿ ಮನೋಹರ್ಲಾಲ್ ಖಟ್ಟರ್ ಅವರಿಗೆ ಪತ್ರ ಬರೆದಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶಾಲಾ ಆಡಳಿತ ಮಂಡಳಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೊಸೈಡ್ ನೋಟ್ ಲಭ್ಯವಾಗಿದೆ ಎಂದಿದ್ದಾರೆ. ಆದರೆ ಬಾಲಕಿ ಪೋಷಕರು ಮಾತ್ರ ಆಕೆಯ ಮೇಲೆ ಅತ್ಯಾಚಾರ ನಡೆದಿದ್ದು, ಯಾರಿಗೂ ಗೊತ್ತಾಗದಂತೆ ಮೃತದೇಹ ಮುಚ್ಚಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.