ಗಜಿಯಾಬಾದ್(ಉತ್ತರಪ್ರದೇಶ): ಬೆಕ್ಕಿನ ಮರಿ ಸಾಕಲು ಅವಕಾಶ ನೀಡಲಿಲ್ಲ ಎಂದು ನೊಂದ 14 ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಮೆಗಾ ಸಿಟಿ ಸೊಸೈಟಿ ಬಳಿ ನಡೆದಿದೆ.
ಲಾಕ್ಡೌನ್ ಸಂದರ್ಭದಲ್ಲಿ ಬಾಲಕ ಮನೆಯಲ್ಲೇ ಇದ್ದ. ಬಾಲಕನ ತಂದೆ ಚೀನಾದಲ್ಲಿದ್ದು, ಆತನನ್ನು ತಾಯಿಯೇ ನೋಡಿಕೊಳ್ಳುತ್ತಿದ್ದಳು. ಮನೆಯಲ್ಲೇ ಇದ್ದು ಇದ್ದು ಬೇಜಾರಾದ ಬಾಲಕ ಬೆಕ್ಕಿನ ಮರಿ ಸಾಕಲು ಅವಕಾಶ ನೀಡುವಂತೆ ತಾಯಿಯನ್ನು ಕೇಳಿಕೊಂಡಿದ್ದ. ಆದ್ರೆ ತಾಯಿ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಹೀಗಾಗಿ ನೊಂದ ಬಾಲಕ ಈ ಹೆಜ್ಜೆ ಇಟ್ಟಿದ್ದಾನೆ ಎಂದು ಗಾಜಿಯಾಬಾದ್ ನಗರ ಠಾಣೆಯ ಎಸ್‌ಪಿ ಅಭಿಷೇಕ್ ವರ್ಮಾ ಹೇಳಿದ್ದಾರೆ.
14 ವರ್ಷದ ಬಾಲಕ ಸಣ್ಣ ವಿಷಯದಿಂದ ನೊಂದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಆಘಾತಕಾರಿ. ಈ ವಯಸ್ಸಿನಲ್ಲಿ ಮಕ್ಕಳ ಮನಸ್ಥಿತಿ ತುಂಬಾ ಸೂಕ್ಷ್ಮವಾಗಿರುತ್ತದೆ ಎಂಬುದನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ಅವರ ಮನಸ್ಸಿಗೆ ನೋವಾಗದಂತೆ ನಾಜೂಕಾಗಿ ಮಕ್ಕಳ ಆರೋಗ್ಯ ನೋಡಿಕೊಳ್ಳಬೇಕಾಗಿರುವುದು ಹೆತ್ತವರ ಕರ್ತವ್ಯ.
ಇಂತಹ ವಯಸ್ಸಿನ ಮಕ್ಕಳಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಮನಸ್ಥಿತಿ ಬರುತ್ತದೆ ಎಂಬುದೇ ಆತಂಕಕಾರಿ. ಇದಕ್ಕೆ ಪೋಷಕರು ಅವಕಾಶ ನೀಡಬಾರದು. ಇದರ ನಡುವೆಯೂ ಮಕ್ಕಳು ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ ಎಂದರೆ ಅದು ಪೋಷಕರ ತಪ್ಪಾಗುತ್ತದೆ.