ಜೈಪುರ (ರಾಜಸ್ಥಾನ): ಕೋವಿಡ್ -19 ಭೀತಿಯ ನಡುವೆ, ಪರಿಸರ ಸ್ನೇಹಿ ಗಣೇಶ ವಿಗ್ರಹಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ವಿವಿಧ ಧಾನ್ಯಗಳು, ಮಸಾಲೆ ಪದಾರ್ಥ ಮತ್ತು ದನದ ಸಗಣಿಯ ವಿಗ್ರಹಗಳ ತಯಾರಿಗೂ ಕಲಾವಿದರಿಗೆ ಪ್ರೋತ್ಸಾಹ ದೊರಕಿದೆ.
ರಾಜಸ್ಥಾನ ರಾಜಧಾನಿ ಜೈಪುರದ ಕಲಾವಿದರೊಬ್ಬರಿಗೆ ಮಸಾಲೆ ಪದಾರ್ಥಗಳಿಂದ ಪ್ರಥಮ ಪೂಜಿತನ ವಿಗ್ರಹ ತಯಾರಿಸುವ ವಿಶಿಷ್ಟ ಆಲೋಚನೆ ಬಂದಿದೆ. ಕಲಾವಿದ ಶಿವಚರಣ್ ಯಾದವ್, ವಿವಿಧ ಮಸಾಲೆ ಪದಾರ್ಥಗಳಾದ ದಾಲ್ಚಿನ್ನಿ, ಕರಿಮೆಣಸು, ಲವಂಗ, ಗುಡುಚಿ ಹಾಗು ಅರಿಶಿಣಗಳಿಂದ ಏಕದಂತನ ವಿಗ್ರಹಗಳನ್ನು ತಯಾರಿಸಿದ್ದಾರೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಯಾದವ್, ಈ ಬಾರಿಯ ಗಣೇಶ ಚತುರ್ಥಿಯಂದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಲಕ್ಷಣಗಳಿಂದ ಸಮೃದ್ಧವಾಗಿರುವ ಮಸಾಲೆ ಪದಾರ್ಥಗಳನ್ನು ಬಳಸಿ ಗಣೇಶನ ವಿಗ್ರಹಗಳನ್ನು ತಯಾರಿಸುತ್ತಿದ್ದೇವೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಶಾಯ ಸೇವಿಸುವಂತೆ ಜನರನ್ನು ಪ್ರಚೋದಿಸುವ ಉದ್ದೇಶದಿಂದ ಈ ವಿಭಿನ್ನ ಆಲೋಚನೆಗೆ ಬಂದಿದ್ದೇನೆ ಎಂದಿದ್ದಾರೆ.
ಈ ವಿಗ್ರಹಗಳ ಅನುಕೂಲಗಳೆಂದರೆ, ಪೂಜೆಯ ನಂತರ ಅವುಗಳನ್ನು ನಿಮಜ್ಜನ ಮಾಡಬೇಕಿಲ್ಲ. ಇದರಲ್ಲಿರುವ ಗಿಡಮೂಲಿಕೆಗಳನ್ನು ತಮ್ಮ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ಬಳಸಬಹುದಾಗಿದೆ.