ದೇಶದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಆಡಳಿತ ನಡೆಸಿರುವ ಸರ್ಕಾರಗಳು ರೈತರನ್ನು ಕಾಡುತ್ತಿರುವ ಸಮಸ್ಯೆಗಳನ್ನು ನಿವಾರಿಸುವಲ್ಲಿ ವಿಫಲವಾಗುತ್ತ ಬಂದಿವೆ. ದೇಶದ 135 ಕೋಟಿ ಜನರಿಗೆ ಆಹಾರ ಒದಗಿಸುತ್ತಿರುವ ಹಾಗೂ ಆಹಾರ ಭದ್ರತೆ ನೀಡುತ್ತಿರುವ ಸಮಾಜದ ಈ ಪ್ರಮುಖ ವಲಯವು ಭರವಸೆಯನ್ನೇ ಕಳೆದುಕೊಂಡು ಸಾವಿಗೆ ಶರಣಾಗುತ್ತಿರುವುದು ನಿಜಕ್ಕೂ ಹೃದಯವಿದ್ರಾವಕ. ರಾಷ್ಟ್ರೀಯ ಅಪರಾಧ ಅಂಕಿಅಂಶಗಳ ಸಂಸ್ಥೆಯ (ಎನ್ಸಿಎಬಿ) ಇತ್ತೀಚಿನ ವರದಿಗಳ ಪ್ರಕಾರ, 2016ರಲ್ಲಿ ದೇಶಾದ್ಯಂತ 11.379 ರೈತರು ಹಾಗೂ ಕೃಷಿ ಕೂಲಿಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿ ದಿನ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರ ಸರಾಸರಿ ಸಂಖ್ಯೆ 31 ಹಾಗೂ ತಿಂಗಳಿಗೆ 948. 2014ನೇ ಸಾಲಿಗೆ (12.360) ಹಾಗೂ 2015ನೇ ಸಾಲಿಗೆ (12.602) ಹೋಲಿಸಿದರೆ ರೈತರ ಆತ್ಮಹತ್ಯೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ರೈತರ ಆತ್ಮಹತ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರ 3.661 ರೈತ ಆತ್ಮಹತ್ಯೆಗಳ ಮೂಲಕ 2016ರಲ್ಲಿಯೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ನಂತರದ ಸ್ಥಾನದಲ್ಲಿ ಕರ್ನಾಟಕ (2.078), ಮಧ್ಯಪ್ರದೇಶ (1.321) ಮತ್ತು ಆಂಧ್ರಪ್ರದೇಶ (804) ರಾಜ್ಯಗಳಿವೆ. ಇದೇ ಅವಧಿಯಲ್ಲಿ ರೈತರ ಆತ್ಮಹತ್ಯೆ ಪ್ರಮಾಣ 21% ರಷ್ಟು ಕಡಿಮೆಯಾಗಿದ್ದರೆ, ಕೃಷಿ ಕೂಲಿಕಾರ್ಮಿಕರ ಆತ್ಮಹತ್ಯೆ ಪ್ರಮಾಣ ಶೇಕಡಾ ಹತ್ತರಷ್ಟು ಹೆಚ್ಚಾಗಿದೆ. ತನ್ನ ಹಿಂದಿನ ವರದಿಗಳಲ್ಲಿ ರೈತರ ಆತ್ಮಹತ್ಯೆಗೆ ಕಾರಣಗಳನ್ನೂ (ಬೆಳೆ ನಷ್ಟ, ಆದಾಯ ನಷ್ಟ, ಸಾಲಗಳು, ಕೌಟುಂಬಿಕ ಸಮಸ್ಯೆಗಳು ಮತ್ತು ಕಾಯಿಲೆ, ಇತ್ಯಾದಿ) ಎನ್ಸಿಆರ್ಬಿ ನಿರ್ದಿಷ್ಟವಾಗಿ ಉಲ್ಲೇಖಿಸುತ್ತಿತ್ತು. ಒಂದು ವೇಳೆ ಪಡೆದುಕೊಂಡ ಸಾಲಗಳು ಅದಕ್ಕೆ ಕಾರಣವಾಗಿದ್ದರೆ, ಅಂತಹ ಸಾಲಗಳ ವಿವರಗಳ ಜೊತೆಗೆ ರೈತರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನೂ ವರದಿಯಲ್ಲಿ ನಮೂದಿಸಲಾಗುತ್ತಿತ್ತು. ಈ ಸಲ, ದತ್ತಾಂಶ ಸಮಗ್ರತೆಗೆ ಹೆಚ್ಚಿನ ವಿಭಾಗಗಳನ್ನು ಸೃಷ್ಟಿಸಲಾಗಿದ್ದರೂ, ಈ ವಿವರಗಳು ಇದುವರೆಗೂ ಬಹಿರಂಗವಾಗಿಲ್ಲ. 6270 ರೈತರು ಹಾಗೂ 5109 ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿರುವ ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿದ ವಿವರಗಳು ಬಿಡುಗಡೆಯಾಗಿರುವ ವರದಿಯಲ್ಲಿ ಉಲ್ಲೇಖವಾಗಿಲ್ಲ. ಸರ್ಕಾರದ ಹಲವಾರು ಪ್ರಾಯೋಜಿತ ಯೋಜನೆಗಳ ಜಾರಿಗೆ ಸಂಬಂಧಿಸಿದ ವಿವರಗಳು ಹೀಗಿವೆ:
ಎನ್ಸಿಆರ್ಬಿ ತನ್ನ ಮಾಹಿತಿ ಸಂಗ್ರಹಣೆ ಪ್ರಾರಂಭಿಸಿದಾಗಿನಿಂದ ಇಲ್ಲಿಯವರೆಗೆ, ಅಂದರೆ, 1995 ಮತ್ತು 2016ರ ಒಳಗೆ ದೇಶಾದ್ಯಂತ ಒಟ್ಟು 3 ಲಕ್ಷ 30 ಸಾವಿರದಾ407ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ದಾಖಲಾಗಿದೆ. ಐಎಎಸ್ ಅಧಿಕಾರಿ ಪಿ.ಸಿ. ಬೋಧ್ ಅವರ ಅಂದಾಜಿನ ಪ್ರಕಾರ, ಇದೇ ಪರಿಸ್ಥಿತಿ ಮುಂದುವರಿದಲ್ಲಿ,2020ರ ಹೊತ್ತಿಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 4 ಲಕ್ಷಕ್ಕೆ ತಲುಪಬಹುದು. ಮಳೆ, ಬಿಸಿಲು ಲೆಕ್ಕಿಸದೇ ಬೆಳೆ ಬೆಳೆಯುವ ರೈತರನ್ನು ಕಾಡುತ್ತಿರುವ ಸಮಸ್ಯೆಗಳು ಹಾಗೂ ಯಾತನೆಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಸತತ ಬೆಳೆ ನಷ್ಟದಿಂದಾಗಿ, ಬ್ಯಾಂಕ್ ಸಾಲದ ಹೊರೆಯಿಂದಾಗಿ, ಬೆಂಬಲ ಬೆಲೆ, ಸಂಗ್ರಹ ಸೌಲಭ್ಯಗಳ ಕೊರತೆಯಿಂದಾಗಿ ಅವರು ತಮ್ಮ ಜೀವನವನ್ನು ಒತ್ತಾಯಪೂರ್ವಕವಾಗಿ ಕೊನೆಗಾಣಿಸಿಕೊಳ್ಳುವಂತಾಗಿದೆ. 2013 ಮತ್ತು 2018ರ ನಡುವೆ 15.556 ರೈತರ ಆತ್ಮಹತ್ಯೆ ಕಂಡಿರುವ ಮಹಾರಾಷ್ಟ್ರದಲ್ಲಿ ಮೂರು ತಿಂಗಳುಗಳ ಹಿಂದೆ ಕಾಣಿಸಿಕೊಂಡ ವಿನಾಶಕಾರಿ ಬರ ರೈತರ ಪ್ರಾಣಕ್ಕೆ ಸಂಚಕಾರ ತಂದಿದ್ದರೆ, ಬೆಳೆದು ನಿಂತಿದ್ದ ಪೈರನ್ನು ಈಗ ಪ್ರವಾಹ ನುಂಗಿ ಹಾಕಿದೆ. ಕೇವಲ ಮಹಾರಾಷ್ಟ್ರವೊಂದೇ ಅಲ್ಲ, ದೇಶಾದ್ಯಂತ ರೈತರು ಇಂಥದೇ ಸಂಕಷ್ಟಮಯ ಪರಿಸ್ಥಿತಿಯಲ್ಲಿದ್ದಾರೆ! ಈ ವರ್ಷ ರೈತರಿಗೆ ಸಂಬಂಧಿಸಿದ ಆತ್ಮಹತ್ಯೆಗಳ ಪ್ರಮಾಣ ಕೇವಲ 280 ಎಂದು ತಪ್ಪಾಗಿ ವರದಿಯಾಗಿದೆ ಎಂದು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿ ವರ್ಷ ಈ ಸಂಖ್ಯೆ ಕನಿಷ್ಠ ಒಂದು ಸಾವಿರ ಎಂದಿವೆ. 17 ರಾಜ್ಯಗಳಲ್ಲಿ ಕೃಷಿ ಕೂಲಿಕಾರ್ಮಿಕರ ಆತ್ಮಹತ್ಯೆ ಪ್ರಮಾಣವು ರೈತರ ಆತ್ಮಹತ್ಯೆ ಪ್ರಮಾಣಕ್ಕಿಂತ ಸಾಕಷ್ಟು ಹೆಚ್ಚಿದ್ದು, ಗ್ರಾಮೀಣ ಪ್ರದೇಶದ ಆರ್ಥಿಕತೆ ಎಂತಹ ದುಃಸ್ಥಿತಿಯಲ್ಲಿದೆ ಎಂಬುದನ್ನು ಬಿಂಬಿಸಿದೆ. ಇದರ ಜೊತೆಗೆ, ಬೇರು ಮಟ್ಟದಲ್ಲಿ ಯಶಸ್ವಿಯಾಗಿರುವ ಉದ್ಯೋಗ ಖಾತ್ರಿ ಯೋಜನೆ ಕೃಷಿ ದಿನಗೂಲಿ ಕಾರ್ಮಿಕರಲ್ಲಿ ಯಾವ ರೀತಿ ಜಾರಿಯಾಗಿದೆ ಎಂಬುದರ ಕಟ್ಟುನಿಟ್ಟಿನ ಪರಾಮರ್ಶೆ ನಡೆಯಬೇಕಿದೆ. 2022ರ ಹೊತ್ತಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲಾಗುವುದು ಎಂಬ ಭರವಸೆಯು ಸೂಕ್ತ ಮತ್ತು ಸಮಗ್ರ ಕ್ರಿಯಾಯೋಜನೆಯಿಂದ ಬೆಂಬಲಿತವಾಗಬೇಕಿದೆ.
ರೈತರಿಗೆ ಪ್ರತಿ ವರ್ಷ ರೂ.6.000 ನಗದು ಸಹಾಯಧನ ನೀಡುವ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. ಕ್ರಿಯಾ ಯೋಜನೆಯನ್ನು ರೂಪಿಸಿ ಜಾರಿಗೊಳಿಸಲು ರಚಿಸಲಾಗಿರುವ ಮುಖ್ಯಮಂತ್ರಿಗಳ ಸಮಿತಿಯು ಕೃಷಿ ಉತ್ಪಾದನೆಗಳ ಮಾರಾಟ, ಗುತ್ತಿಗೆ ಕೃಷಿ ದ್ಧತಿಗಳು ಮತ್ತು ಖಾಸಗಿ ಹೂಡಿಕೆಯನ್ನು ಹೆಚ್ಚಿಸುವ ಮಾರ್ಗಗಳಲ್ಲಾಗಿರುವ ಬದಲಾವಣೆಗಳ ಮೌಲ್ಯಮಾಪನ ಮಾಡುವ ಮೂಲಕ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಬೇಕಿದೆ. ಫಡಣವೀಸ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾಲ್ಕು ತಿಂಗಳುಗಳ ಹಿಂದೆ ರಚಿಸಲಾಗಿದ್ದ ಕ್ರಿಯಾಪಡೆಯ ಭವಿಷ್ಯ ಅತಂತ್ರವಾಗಿದೆ. ಭಾರತೀಯ ಕೃಷಿ ಸಮುದಾಯಕ್ಕೆ ಕ್ರಿಯಾ ಯೋಜನೆಯೊಂದನ್ನು ಅಭಿವೃದ್ಧಿಪಡಿಸಿ ಜಾರಿಗೊಳಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕೆಂಬ ರೈತರ ಅನೇಕ ಸಂಘಟನೆಗಳ ಮನವಿಗಳಿಗೆ ಯಾವುದೇ ಮನ್ನಣೆ ನೀಡಿಲ್ಲ ಎಂಬುದು ಇಲ್ಲಿ ಗಮನಾರ್ಹ. 2015ರಲ್ಲಿ ಸಾಲ ಪಡೆದಿದ್ದ ಶೇಕಡಾ 80ರಷ್ಟು ರೈತರು ಬ್ಯಾಂಕುಗಳು ಮತ್ತು ಸಣ್ಣ ಹಣಕಾಸು ಕಂಪನಿಗಳಿಂದ ಆ ಸಾಲಗಳನ್ನು ಪಡೆದುಕೊಂಡಿದ್ದರು ಎಂಬುದನ್ನು ಅಂಕಿಅಂಶಗಳು ತೋರಿಸಿವೆ. ರೈತರ ಸಹಕಾರಿ ಸಾಲವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಹತ್ತಿರದಲ್ಲೆಲ್ಲೂ ಪರಿಹಾರ ಕಾಣುತ್ತಿಲ್ಲ. ಈ ಸಾಂಸ್ಥಿಕ ಸವಾಲುಗಳ ಜೊತೆಗೆ ಪರಿಸರ ಬದಲಾವಣೆಯ ಋಣಾತ್ಮಕ ಪರಿಣಾಮವನ್ನೂ ಸಣ್ಣ ಹಿಡುವಳಿದಾರರು ಎದುರಿಸಬೇಕಾಗಿದೆ. ಪ್ರಾದೇಶಿಕ ಅಥವಾ ರಾಜ್ಯ ಮಟ್ಟದಲ್ಲಿ ಅಲ್ಲದೇ ಪ್ರತಿಯೊಂದು ಜಿಲ್ಲೆಗೂ ಅನ್ವಯವಾಗುವ ರೀತಿ ಹವಾಮಾನಕ್ಕೆ ಒಗ್ಗುವಂತಹ ಕೃಷಿ ಯೋಜನೆಯೊಂದನ್ನು ಜಾರಿಗೊಳಿಸಬೇಕಾಧ ಅವಶ್ಯಕತೆಯನ್ನು ಮುಂಬೈನ ಐಐಟಿ ಸಂಶೋಧಕರು ಒತ್ತಿ ಹೇಳಿದ್ದಾರೆ. ಕೇರಳದ ಪ್ರವಾಹ ನಿರೋಧಕ ಪೊಕ್ಕಲಿ ಬತ್ತದ ತಳಿಗೆ ಎಲ್ಲಾ ಪ್ರವಾಹಪೀಡಿತ ಪ್ರದೇಶಗಳಲ್ಲಿ ಆದ್ಯತೆ ನೀಡಬೇಕೆಂದು ವಿಜ್ಞಾನಿಗಳು ಸಲಹೆ ನೀಡುತ್ತಿದ್ದಾರೆ. ಕೃಷಿಯನ್ನು ವಿಜ್ಞಾನದೊಂದಿಗೆ ಜೋಡಿಸುವುದು ಹಾಗೂ ದೇಶದ ಆಹಾರ ಭದ್ರತೆಗೆ ರೈತರ ಜೀವ ಮಹತ್ವದ್ದು ಎಂಬುದನ್ನು ಮನಾಣುವ ಸಮಯ ಈಗ ಬಂದಿದೆ.