ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 64 ದಿನಗಳಲ್ಲಿ 100 ರಿಂದ 1 ಲಕ್ಷಕ್ಕೆ ತಲುಪಿದೆ. ಇದು ಅಮೆರಿಕಾ ಮತ್ತು ಸ್ಪೇನ್‌ಗೆ ಹೋಲಿಸಿದರೆ ದಿನಗಳ ಸಂಖ್ಯೆ ಎರಡು ಪಟ್ಟು ಇದೆ ಎಂದು ವರ್ಲ್ಡೋಮೀಟರ್ ಹೇಳಿದೆ.
ವರ್ಲ್ಡೋಮೀಟರ್ ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ಇದರಲ್ಲಿ ಡೆವಲಪರ್ಸ್, ಸಂಶೋಧಕರು ಹಾಗೂ ಸ್ವಯಂಪ್ರೇರಿತ ಸದಸ್ಯರಿದ್ದಾರೆ. ಜನಸಂಖ್ಯೆ ಮತ್ತು ಸೋಂಕಿತರ ಸಂಖ್ಯೆ ಸೇರಿದಂತೆ ಇತರೆ ಮಾಹಿತಿಯ ಆಧಾರದ ಮೇಲೆ ಪ್ರಸ್ತುತ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
ಮಂಗಳವಾರಕ್ಕೆ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1 ಲಕ್ಷಕ್ಕೆ ತಲುಪಿದೆ. ಇದು ಕೆಲ ರಾಷ್ಟ್ರಗಳಿಗೆ ಹೋಲಿಸಿಕೊಂಡರೆ ಸೋಂಕು ಹರಡುತ್ತಿರುವ ಪ್ರಮಾಣ ತೀರ ಕಡಿಮೆ ಇದೆ. ಭಾರತಕ್ಕೆ ಹೋಲಿಸಿದರೆ ಜರ್ಮನಿ, ಫ್ರಾನ್ಸ್, ಯುಕೆಯಲ್ಲಿ ಕಡಿಮೆ ಅವಧಿಯಲ್ಲೇ 100 ರಿಂದ 1 ಲಕ್ಷಕ್ಕೆ ಸೋಂಕಿತ ಪ್ರಕರಣಗಳು ದಾಖಲಾಗಿವೆ.
ಅಮೆರಿಕಾ 25 ದಿನದಲ್ಲಿ, ಸ್ಪೇನ್ 30 ಹಾಗೂ ಜರ್ಮನಿ 35 ದಿನಗಳಲ್ಲಿ 1 ಲಕ್ಷ ಗಡಿಯನ್ನು ದಾಟಿವೆ ಎಂದು ವರ್ಲ್ಡೋಮೀಟರ್ ಹೇಳಿದೆ. ಉಳಿದಂತೆ ಇಟಲಿ 36 ದಿನ, ಫ್ರಾನ್ಸ್ 39 ದಿನ ಯುಕೆ 42 ದಿನಗಳಲ್ಲಿ 1 ಲಕ್ಷ ಮಂದಿಯಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ.
ಇಡೀ ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ಅಗ್ರ ಪಟ್ಟಿಯಲ್ಲಿ ಚೀನಾದ ನಂತರ ಭಾರತ ಎರಡನೇ ಸ್ಥಾನದಲ್ಲಿದ್ದರೂ, ಸೋಂಕಿತರ ಸಂಖ್ಯೆ ಅಷ್ಟಾಗಿ ಹೆಚ್ಚಳವಾಗಿಲ್ಲ. ದೇಶದಲ್ಲಿ ಕೇವಲ 3.2 ರಷ್ಟು ಸೋಂಕಿತರ ಪ್ರಮಾಣ ಇದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದರು.
ಸದ್ಯ ದೇಶದಲ್ಲಿ 1,01,139 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 4970 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 134 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 3,163ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ, ದೆಹಲಿ, ಗುಜರಾತ್, ರಾಜಸ್ಥಾನ ಸೋಂಕಿತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ.