ಸಿಧಿ (ಮಧ್ಯ ಪ್ರದೇಶ): ಸಿಡಿಲು ಬಡಿದು ಮೂವರು ಸಹೋದರರು ಮತ್ತು ಓರ್ವ ಸೋದರ ಸಂಬಂಧಿಯ ಮಗ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸಿಧಿ ಜಿಲ್ಲೆಯ ಖಾದಿ ಖುರ್ದ್ ಗ್ರಾಮದಲ್ಲಿ ನಡೆದಿದೆ.
ಖಾದಿ ಖುರ್ದ್ ಗ್ರಾಮದ ಶಿವನಾಥ್ ಸಾಖೇತ್ ಎಂಬವರ ಮೂವರು ಮಕ್ಕಳು ಮತ್ತು ಸೋದರ ಸಂಬಂಧಿಯ ಮಗ ಮೃತಪಟ್ಟಿದ್ದಾರೆ. ಭಾರೀ ಗಾಳಿ ಮಳೆಯ ವೇಳೆ ಈ ನಾಲ್ವರು ಮರದ ಕೆಳಗೆ ಆಶ್ರಯ ಪಡೆದಿದ್ದ ವೇಳೆ ಮರಕ್ಕೆ ಸಿಡಿಲು ಬಡಿದಿದೆ. ಘಟನೆಯಲ್ಲಿ ಶಿವನಾಥ್ ಸಾಖೇತ್ ಅವರ ಮೂವರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸೋದರ ಸಂಬಂಧಿ ಬ್ರಿಜೇಶ್ ಸಾಖೇತ್ ಅವರ ಮಗ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಖಾದಿ ಚೌಕ್ ಉಸ್ತುವಾರಿ ಧರ್ಮೇಂದ್ರ ಸಿಂಗ್ ರಜಪೂತ್ ತಿಳಿಸಿದ್ದಾರೆ.
ಒಂದೇ ಕುಟುಂಬದ ಮೂವರು ಮಕ್ಕಳ ಸಾವಿನಿಂದ ಖಾದಿ ಖುರ್ದ್ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.