ನ್ಯೂಯಾರ್ಕ್( ಅಮೆರಿಕ): ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದ ಆರೋಪದ ಮೇಲೆ ನಾಲ್ವರು ಭಾರತೀಯರನ್ನು ಸೇರಿದಂತೆ 6 ಮಂದಿಯನ್ನು ಅಲ್ಲಿನ ಅಮೆರಿಕನ್ ಕಸ್ಟಂ ಹಾಗೂ ಬಾರ್ಡರ್ ಪ್ರೊಟೆಕ್ಷನ್ ಸಿಬ್ಬಂದಿ ಬಂಧಿಸಿದ್ದಾರೆ. ಕಳ್ಳ ಸಾಗಾಣಿಕೆ ಆರೋಪದಲ್ಲಿ ಹಿಂದಿನ ವಾರ 6 ಮಂದಿಯನ್ನು ಬಂಧಿಸಿದ್ದು ಅದರಲ್ಲಿ ನಾಲ್ಕು ಮಂದಿ ಭಾರತೀಯರೆಂದು ತಿಳಿದು ಬಂದಿದೆ. ಮೇಲ್ನೋಟಕ್ಕೆ ಅಕ್ರಮವಾಗಿ ಅಮೆರಿಕದಲ್ಲಿ ನೆಲೆಯೂರಿದವರೆಂದು ತಿಳಿದು ಬಂದಿದ್ದು, ಸದ್ಯಕ್ಕೆ ಗಡಿ ಗಸ್ತು ಠಾಣೆಗೆ ವಿಚಾರಣೆಗಾಗಿ ಕರೆದೊಯ್ಯಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಗಡಿ ಕಾನೂನುಗಳನ್ನು ಉಲ್ಲಂಘಿಸಿದ ಎಲ್ಲರಿಗೂ ಗರಿಷ್ಠ 10 ವರ್ಷಗಳ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
''ಗಡಿ ನುಸುಳುಕೋರರ ಚಟುವಟಿಕೆಗಳು ಕೆಲವು ತಿಂಗಳುಗಳಿಂದ ಗಣನೀಯವಾಗಿ ಹೆಚ್ಚಾಗಿದ್ದವು. ಇದನ್ನು ಗಮನಿಸಿದ ನಾವು ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿದ್ದೆವು. ಇದರಿಂದಾಗಿ ಕೆಲವು ಗಡಿ ನುಸುಳುಕೋರರನ್ನು ಬಂಧಿಸಲು ಸಾಧ್ಯವಾಗಿದೆ'' ಎಂದು ಅಲ್ಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ಮಸ್ಸೇನಾ ಸ್ಟೇಷನ್ ಏರಿಯಾದಲ್ಲಿ ಕಟ್ಟು ನಿಟ್ಟಿನ ಭದ್ರತೆಯನ್ನು ನಿಯೋಜಿಸಲಾಗಿದೆ. ಅಮೆರಿಕನ್ ಕಸ್ಟಂ ಹಾಗೂ ಬಾರ್ಡರ್ ಪ್ರೊಟೆಕ್ಷನ್ ಸಂಸ್ಥೆ ಅಮೆರಿಕ ಗೃಹ ಭದ್ರತಾ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದ್ದು, ಗಡಿಗಳಲ್ಲಿ ಕಟ್ಟೆಚ್ಚರ ವಹಿಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ.